Quick ಸುದ್ದಿಗೆ ಒಂದು click Straight Talk

’ಕಲಾವಿದರು ಒಂದೇ ಕುಟುಂಬ’ ಎನ್ನುತ್ತಿದ್ದರು ಅಣ್ಣಾವ್ರು!

ಬದುಕಿರುವವರೆಗೂ ನುಡಿದಂತೆ ನಡೆದ ವರನಟ – ನಡೆ-ನುಡಿಯಿಂದೇ ಡಾ. ರಾಜಕುಮಾರ್ ಇಂದಿನವರಿಗೂ ಮಾದರಿ

‘ನಾವೆಲ್ಲರೂ ಕಲಾವಿದರು. ಕಲಾವಿದರು ಅಂದ್ರೆ ಕಲಾದೇವಿಯ ಮಕ್ಕಳು. ಕಲಾವಿದರು ಅಂದ್ರೆ ಒಂದೇ ಕುಟುಂಬದವರು. ಹಾಗಂದ ಮೇಲೆ ನಮ್ಮಲ್ಲಿ ಬೇಧ-ಭಾವ ಯಾಕೆ? ಹೆತ್ತ ತಾಯಿ ತನ್ನ ಮಕ್ಕಳಲ್ಲಿ ಎಂದಾದರೂ ಬೇಧ-ಭಾವ ಮಾಡುತ್ತಾಳೆಯೇ? ಕಲೆ ಯಾರಪ್ಪನ ಸ್ವತ್ತೂ ಅಲ್ಲ. ಕಲಾದೇವಿ ಪ್ರತಿಯೊಬ್ಬ ಕಲಾವಿದರಿಗೂ, ಅವರಿಗಂತಲೇ ಒಂದಷ್ಟು ವಿಶೇಷ ಕಲಾ ಗುಣಗಳನ್ನು ಕೊಟ್ಟಿರುತ್ತಾಳೆ. ನಾವು ಅದನ್ನು ಗುರುತಿಸಿ, ಗೌರವಿಸಬೇಕು. ಯಾರಿಗೆ ಏನೇನು ನಮ್ಮಿಂದ ಸಲ್ಲಬೇಕೋ, ಅದನ್ನು ಪ್ರಾಮಾಣಿಕವಾಗಿ ಸಲ್ಲಿಸಬೇಕು. ತಾಳ್ಮೆಯಿಂದ ಇನ್ನೊಬ್ಬರ ಕಷ್ಟ-ಸುಖಗಳನ್ನು ಆಲಿಸುವ, ಸಮಾಧಾನ, ಸಾಂತ್ವಾನ ಮಾಡುವ ದೊಡ್ಡ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ನಾವು ದೊಡ್ಡವರಾಗುತ್ತೇವೆ ’ – ಇದು ವರನಟ ಡಾ. ರಾಜಕುಮಾರ್ ಅವರ ಮನದಾಳದ ಮಾತು.

ಡಾ. ರಾಜಕುಮಾರ್ ನಿಧನರಾಗುವುದಕ್ಕೂ ಕೆಲ ವರ್ಷಗಳ ಮೊದಲು ಕನ್ನಡದ ವಾಹಿನಿ (ಚಾನೆಲ್) ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತು. ಇಂದಿಗೂ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ, ಕೆಲವರ ವಾಟ್ಸಾಪ್, ಫೇಸ್ ಬುಕ್ ಸ್ಟೇಟಸ್ ಗಳಲ್ಲಿ ಡಾ. ರಾಜಕುಮಾರ್ ಆಡಿರುವ ಈ ಮಾತುಗಳು ದೃಶ್ಯ, ಧ್ವನಿ ಮತ್ತು ಅಕ್ಷರಗಳ ಸಾಲುಗಳ ರೂಪದಲ್ಲಿ ಹರಿದಾಡುತ್ತಲೇ ಇರುತ್ತದೆ.

ಹಿಂದೆಯೂ ಪ್ರಸ್ತುತವಾಗಿದ್ದ, ಇಂದಿಗೂ ಪ್ರಸ್ತುತವಾಗಿರುವ ಮತ್ತು ಮುಂದೆಯೂ ಪ್ರಸ್ತುತವಾಗಿರುವ ಅಣ್ಣಾವ್ರು ಹೇಳಿದ ಈ ಮಾತುಗಳು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಇಡೀ ಕಲಾ ಜಗತ್ತಿಗೇ ಅನ್ವಯವಾಗುವಂಥದ್ದು. ಇದನ್ನು ಹೇಳಿದ ಡಾ. ರಾಜಕುಮಾರ್ ಕೂಡ ಅಕ್ಷರಶಃ ತಮ್ಮ ಕಲಾಜೀವನದಲ್ಲಿ ಹಾಗೆಯೇ ನಡೆದುಕೊಂಡಿದ್ದರು. ತಮ್ಮ ಮನೆಯಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮವಿರಲಿ, ಸಂಭ್ರಮ-ಸಡಗರವಿರಲಿ ಎಲ್ಲದಕ್ಕೂ ತಮಗೆ ಪರಿಚಿತರಾಗಿರುವ ಎಲ್ಲ ಕಲಾವಿದರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದರು. ಅವರ ಕಷ್ಟ-ಸುಖಗಳಿಗೆ ಕಿವಿಯಾಗುತ್ತಿದ್ದರು.

ಇಂದು ಚಿತ್ರರಂಗವೆಂಬ ಕಲಾ ಕುಟುಂಬದಲ್ಲಿ ಒಬ್ಬೊಬ್ಬ ಕಲಾವಿದರು ಒಂದೊಂದು ದಿಕ್ಕು ಎನ್ನುವಂತಾಗಿದೆ. ಒಬ್ಬರ ಗೆಲುವು ಮತ್ತೊಬ್ಬರು ಸಂಭ್ರಮಿಸಲಾಗದಂತಹ ಸಣ್ಣ ಗುಣ, ದೊಡ್ಡ ಕಲಾವಿದರು ಎನಿಸಿಕೊಂಡವರಲ್ಲೂ ಆಗಾಗ್ಗೆ ಕಾಣುತ್ತಲೇ ಇರುತ್ತದೆ. ಚಿತ್ರರಂಗವೆಂಬ ಒಂದು ಕುಟುಂಬದಲ್ಲಿ ಆಗಾಗ್ಗೆ ಮೂಡುವ ಬೇಸರ, ಭಿನ್ನಾಭಿಪ್ರಾಯ, ಕಲಹ, ವೇದನೆ ಎಲ್ಲದಕ್ಕೂ ಅಣ್ಣಾವ್ರು ಹೇಳಿದ ಮಾತಿನಲ್ಲಿ ಉತ್ತರವಿದೆ. ಆದರೆ ಅದನ್ನು ಅರ್ಥೈಸಿಕೊಂಡು, ಅನುಸರಿಸುವ ದೊಡ್ಡ ಮನಸ್ಸನ್ನು ಕಲಾವಿದರಾದವರು ಬೆಳೆಸಿಕೊಳ್ಳಬೇಕು.

Related Posts

error: Content is protected !!