Pop Corner Street Beat

ಬಾಲಿವುಡ್ ಕಡೆಗೆ ರಿಷಬ್ ಶೆಟ್ಟಿ ನಡಿಗೆ

ಬಿಗ್ ಬಜೆಟ್ ಹಿಂದಿ ಸಿನಿಮಾದಲ್ಲಿ ನಟ ಕಂ ನಿರ್ದೇಶಕ!

ಐತಿಹಾಸಿಕ ಪಾತ್ರದಲ್ಲಿ ಮಿಂಚಲು ‘ಕಾಂತಾರ’ ಶಿವ ತಯಾರಿ

ಕನ್ನಡ ಚಿತ್ರರಂಗಕ್ಕೆೆ ಆರಂಭದಲ್ಲಿ ನಿರ್ದೇಶಕನಾಗಿ ಪರಿಚಯವಾಗಿ, ಆ ನಂತರ ನಾಯಕ ನಟನಾಗಿ ತನ್ನದೇ ಆದ ಛಾಪು ಮೂಡಿಸಿರುವವರು ನಿರ್ದೇಶಕ ಕಂ ನಟ ರಿಷಬ್ ಶೆಟ್ಟಿ. ‘ಕಾಂತಾರ’ ಸಿನಿಮಾದ ಸೂಪರ್ ಹಿಟ್ ಸಕ್ಸಸ್ ರಿಷಬ್ ಶೆಟ್ಟಿ ಎನ್ನುವ ಅಪ್ಪಟ ಕನ್ನಡದ ಪ್ರತಿಭೆಯನ್ನು ಇಡೀ ದೇಶವೇ ಗುರುತಿಸುವಂತೆ ಮಾಡಿದೆ. ಸದ್ಯ ರಿಷಬ್ ಶೆಟ್ಟಿ ತಮ್ಮ ಬಹುನಿರೀಕ್ಷಿತ ‘ಕಾಂತಾರ-2’ ಸಿನಿಮಾವನ್ನು ತೆರೆಗೆ ತರಲು ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಇದರ ನಡುವೆಯೇ ರಿಷಬ್ ಶೆಟ್ಟಿ ಕುರಿತಾದ ದೊಡ್ಡ ಸುದ್ದಿಯೊಂದು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ. ಅದೇನೆಂದರೆ, ರಿಷಬ್ ಶೆಟ್ಟಿ ಶೀಘ್ರದಲ್ಲಿಯೇ ಬಾಲಿವುಡ್‌ನತ್ತ ಮುಖ ಮಾಡಲಿದ್ದಾರಂತೆ..! ಹೌದು, ರಿಷಬ್ ಶೆಟ್ಟಿ ಹಿಂದಿಯ ಬಿಗ್ ಬಜೆಟ್ ಸಿನಿಮಾವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಶೀಘ್ರದಲ್ಲಿಯೇ ಈ ಸಿನಿಮಾದ ಬಗ್ಗೆೆ ಅಧಿಕೃತ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಬಾಲಿವುಡ್‌ನ ಖ್ಯಾತ ನಿರ್ದೇಶಕ ಆಶುತೋಶ್ ಗೋವಾರಿಕರ್ ನಿರ್ದೇಶನದ ಮುಂಬರಲಿರುವ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅಭಿನಯಿಸಲಿದ್ದಾರೆ.

ಹಿಂದಿಯಲ್ಲಿ ‘ಲಗಾನ್’, ‘ಪಾಣಿಪತ್’, ‘ಮೊಹೆಂಜೊದಾರೋ’ ದಂಥ ಪಿರಿಯಾಡಿಕ್ ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕ ಆಶುತೋಶ್ ಗೋವಾರಿಕರ್, ಸದ್ಯ ದಕ್ಷಿಣ ಭಾರತವನ್ನು ಆಳಿದ ರಾಜನೊಬ್ಬನ ಬದುಕಿನ ಸತ್ಯ ಘಟನೆ ಆಧರಿಸಿದ ಮತ್ತೊಂದು ಅಂಥದ್ದೇ ಐತಿಹಾಸಿಕ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾಾರೆ. ಈಗಾಗಲೇ ಈ ಸಿನಿಮಾದ ಸ್ಕ್ರಿಪ್ಟ್‌ ಕೆಲಸಗಳು ಕೂಡ ಶುರುವಾಗಿದ್ದು, ಜೊತೆಗೆ ನಿಧಾನವಾಗಿ ಕಲಾವಿದರ ಆಯ್ಕೆ ಕೂಡ ನಡೆಯುತ್ತಿದೆ. ಸುಮಾರು 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆೆ ‘ತಲೈವಿ’ ಸಿನಿಮಾದ ನಿರ್ಮಾಪಕ ವಿಷ್ಣುವರ್ಧನ್ ಬಂಡವಾಳ ಹಾಕುತ್ತಿದ್ದಾರೆ. ಮುಂದಿನ ವರ್ಷ ಶೂಟಿಂಗ್ ಆರಂಭವಾಗಲಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, 2025ರ ಅಂತ್ಯಕ್ಕೆೆ ಸಿನಿಮಾವನ್ನು ಬಿಡುಗಡೆ ಮಾಡುವ ಪ್ಲಾನ್ ನಲ್ಲಿದೆ ಚಿತ್ರತಂಡ ಎನ್ನುವುದು ಪ್ರಾಥಮಿಕ ಮಾಹಿತಿ.

ರಿಷಬ್ ಶೆಟ್ಟಿ ಬಾಲಿವುಡ್‌ಗೆ ಅಡಿಯಿಡುತ್ತಿರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದ್ದರೂ, ನಟ ರಿಷಬ್ ಶೆಟ್ಟಿ ಮಾತ್ರ ಇನ್ನೂ ಈ ಬಗ್ಗೆೆ ತುಟಿಬಿಚ್ಚಿಲ್ಲ. ಸದ್ಯಕ್ಕೆೆ ‘ಕಾಂತಾರ-2’ ಸಿನಿಮಾಕ್ಕಾಗಿ ರಿಷಬ್ ಮತ್ತು ತಂಡ  ಸಕಲ ತಯಾರಿ ಮಾಡಿಕೊಳ್ಳುತ್ತಿದ್ದು, ಇದೇ ನವೆಂಬರ್‌ನಿಂದ ಶೂಟಿಂಗ್ ಶುರುವಾಗಲಿದೆ. ಹಾಗೇನಾದರೂ ರಿಷಬ್ ಈ ಹಿಂದಿ ಸಿನಿಮಾ ಒಪ್ಪಿಕಂಡರೂ ಮುಂದಿನ ವರ್ಷದ ಮಧ್ಯಭಾಗದ ನಂತರವಷ್ಟೇ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎಂಬುದು ಶೆಟ್ಟರ ಆಪ್ತ ಬಳಗದವರ ಅಭಿಪ್ರಾಯ.

Related Posts

error: Content is protected !!