Quick ಸುದ್ದಿಗೆ ಒಂದು click Telewalk

ಸಿನಿಮಾದಲ್ಲಿ ರೀ-ಎಂಟ್ರಿಗೆ ವಿಜಯ್ ಸೂರ್ಯ ರೆಡಿ

’ವೀರಪುತ್ರ’ನ ಲುಕ್ ನಲ್ಲಿ ಅಗ್ನಿಸಾಕ್ಷಿ ವಿಜಯ್ ಸೂರ್ಯ

ಮಾಸ್ ಗೆಟಪ್ ನಲ್ಲಿ ಚಾಕೊಲೇಟ್ ಹೀರೋ

ಕಿರುತೆರೆ ಕಲಾವಿದರು ಹಿರಿತೆರೆಗೆ ಬರುವುದು ಹೊಸದೇನಲ್ಲ. ಪ್ರತಿವರ್ಷ ನೂರಾರು ಕಿರುತೆರೆ ಕಲಾವಿದರು ಸಿನಿಮಾ ಅಂಥ ಹಿರಿತೆರೆಗೆ ಅಡಿಯಿಡುತ್ತಲೇ ಇರುತ್ತಾರೆ. ಆದರೆ ಹೀಗೆ ಹಿರಿತೆರೆಗೆ ಬಂದವರಲ್ಲಿ ಕೆಲವೇ ಕೆಲವು ಮಾತ್ರ ಮೊದಲ ಹೆಜ್ಜೆಯಲ್ಲೇ ಯಶಸ್ವಿಯಾಗುತ್ತಾರೆ. ಇನ್ನು ಕೆಲವರು ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಲೇ ಇರುತ್ತಾರೆ. ಈಗ ಹೀಗೆ ಕಿರುತೆರೆಯಿಂದ ಮತ್ತೆೆ ಹಿರಿತೆರೆಗೆ ಹೋಗುತ್ತಿರುವುದು ನಟ ವಿಜಯ್ ಸೂರ್ಯ.

ಅಂದಹಾಗೆ, ಕಿರುತೆರೆಯ ‘ಅಗ್ನಿಸಾಕ್ಷಿ’ ಸೀರಿಯಲ್ ಮೂಲಕ ಮನೆ ಮಾತಾದ ನಟ ವಿಜಯ್ ಸೂರ್ಯಗೆ ಸಿನಿಮಾರಂಗ ಹೊಸದೇನಲ್ಲ. ಹೀಗೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಷ್ಟಕಾಮ್ಯ’ ಸಿನಿಮಾದ ಮೂಲಕ ವಿಜಯ್ ಸೂರ್ಯ ನಾಯಕ ನಟನಾಗಿ ಹಿರಿತೆರೆಗೆ ಪರಿಚಯವಾಗಿದ್ದರು. ಆದರೆ ಆ ನಂತರ ಹೇಳುಕೊಳ್ಳುವಂತಹ ಅವಕಾಶಗಳು ಸಿನಿಮಾರಂಗದಲ್ಲಿ ಬಾರದಿದ್ದರಿಂದ, ವಿಜಯ್ ಸೂರ್ಯ ಮತ್ತೆೆ ಕಿರುತೆರೆಗೇ ವಾಪಾಸಾಗಿದ್ದರು. ಸದ್ಯ ಕಿರುತೆರೆಯಲ್ಲಿ ‘ಪ್ರೇಮಲೋಕ’ ಸೀರಿಯಲ್‌ನಲ್ಲಿ ನಟಿಸುತ್ತಿರುವ ವಿಜಯ್ ಸೂರ್ಯ, ಎರಡನೇ ಬಾರಿಗೆ ಸಿನಿಮಾರಂಗಕ್ಕೆೆ ‘ವೀರಪುತ್ರ’ ಎಂಬ ಸಿನಿಮಾದ ಮೂಲಕ ರೀ-ಎಂಟ್ರಿ ಕೊಡುತ್ತಿದ್ದಾರೆ.

ಇದೇ ಸೆಪ್ಟೆೆಂಬರ್ ಮೊದಲವಾರ (ಸೆ. 7ರಂದು) ವಿಜಯ್ ಸೂರ್ಯ ಹುಟ್ಟುಹಬ್ಬದ ಅಂಗವಾಗಿ ಅವರು ನಟಿಸುತ್ತಿರುವ ಹೊಸ ಸಿನಿಮಾ ‘ವೀರಪುತ್ರ’ದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಇನ್ನು ಈ ಲುಕ್‌ನಲ್ಲಿ ನಟ ವಿಜಯ್ ಸೂರ್ಯ ಉದ್ದ ಕೂದಲು ಬಿಟ್ಟು, ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಸಪ್ಲಿಮೆಂಟರಿ’ ಎಂಬ ಸಿನಿಮಾ ನಿರ್ದೇಶಿಸಿದ್ದ ದೇವರಾಜ್ ಎಸ್. ‘ವೀರಪುತ್ರ’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದು, ಮೆಡಿಕಲ್ ಮಾಫಿಯಾ- ಫ್ಯಾಮಿಲಿ ಸೆಂಟಿಮೆಂಟ್ ಸುತ್ತ ಸಿನಿಮಾದ ಕಥಾಹಂದರ ಸಾಗುತ್ತದೆ. ಗುರು ಬಂಡಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

‘ವೀರಪುತ್ರ’ ಸಿನಿಮಾದಲ್ಲಿ ವಿಜಯ್ ಸೂರ್ಯಗೆ ಜೋಡಿಯಾಗಿ ಲೇಖಾಚಂದ್ರ ನಟಿಸುತ್ತಿದ್ದು, ಹಿರಿಯ ನಟಿ ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆೆ ಚಂದ್ರಶೇಖರ್ ಬಂಡಿಯಪ್ಪ ಸಂಭಾಷಣೆ, ಜೂಡಾ ಸ್ಯಾಂಡಿ ಸಂಗೀತ, ಸಿ. ರವಿಚಂದ್ರನ್ ಸಂಕಲನ, ಉದಯ್ ಆದಿತ್ಯ ಛಾಯಾಗ್ರಹಣ, ಪ್ರಮೋದ್ ಮರವಂತೆ ಸಾಹಿತ್ಯವಿದೆ. ಈಗಾಗಲೇ ಬೆಂಗಳೂರು, ಹೈದರಾಬಾದ್ ಸುತ್ತಮುತ್ತ ಶೇ 60ರಷ್ಟು ಸಿನಿಮಾದ ಶೂಟಿಂಗ್ ನಡೆಸಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಆರಂಭದಲ್ಲಿ ವಿಜಯ್ ಸೂರ್ಯ ‘ವೀರಪುತ್ರ’ ತೆರೆಗೆ ಬರಲಿದ್ದಾನೆ.

Related Posts

error: Content is protected !!