ಶಿವಣ್ಣ – ಡಾಲಿ ‘ಉತ್ತರಕಾಂಡ’ಕ್ಕೆ ದಿಗಂತ್ ಎಂಟ್ರಿ!

ಕುತೂಹಲ ಮೂಡಿಸಿದ ದಿಗಂತ್ ಹೊಸ ಗೆಟಪ್
ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಮತ್ತು ನಟರಾಕ್ಷಸ ಡಾಲಿ ಧನಂಜಯ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ಉತ್ತರಕಾಂಡ’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಇದರ ನಡುವೆಯೇ ಈಗ ಈ ಸಿನಿಮಾದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ‘ಉತ್ತರಕಾಂಡ’ ಸಿನಿಮಾದಲ್ಲಿ ನಟ ದೂದ್ ಪೇಡ ಖ್ಯಾತಿಯ ದಿಗಂತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ!

ದೂದ್ ಪೇಡಾ ದಿಗಂತ್ ‘ಉತ್ತರಕಾಂಡ’ದಲ್ಲಿ ‘ಮಿರ್ಚಿ ಮಲ್ಲಿಗೆ’
ಹೌದು, ಸ್ವತಃ ‘ಉತ್ತರಕಾಂಡ’ ಚಿತ್ರತಂಡ ಈ ಸುದ್ದಿಯನ್ನು ಬಹಿರಂಗಪಡಿಸಿದ್ದು, ಸಿನಿಮಾದಲ್ಲಿ ದಿಗಂತ್ ಕಾಣಿಸಿಕೊಳ್ಳುತ್ತಿರುವ ಪಾತ್ರದ ಸಣ್ಣ ಗೆಟಪ್ ಅನ್ನು ಬಿಡುಗಡೆ ಮಾಡಿದೆ. ನಟ ದಿಗಂತ್ ‘ಉತ್ತರಕಾಂಡ’ ಸಿನಿಮಾದಲ್ಲಿ ‘ಮಿರ್ಚಿ ಮಲ್ಲಿಗೆ’ ಎಂಬ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿರುವ ‘ಉತ್ತರಕಾಂಡ’ ಸಿನಿಮಾದ ಪೋಸ್ಟರ್ ನಲ್ಲಿನ ದಿಗಂತ್ ಅವರ ಖಡಕ್ ಲುಕ್ ಕುತೂಹಲ ಕೆರಳಿಸಿದ್ದು, ಈ ಪೋಟೋ ಒಂದಷ್ಟು ವೈರಲ್ ಆಗಿದೆ.
ಇನ್ನು ’ಉತ್ತರಕಾಂಡ’ ಒಂದು ಆ್ಯಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದಕ್ಕೆ ರೋಹಿತ್ ಪದಕಿ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ‘ಉತ್ತರಕಾಂಡ’ ಚಿತ್ರವನ್ನು ‘ಕೆ.ಆರ್.ಜಿ ಸ್ಟುಡಿಯೋಸ್’ ಬ್ಯಾನರಿನಲ್ಲಿ ಕಾರ್ತಿಕ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, 2024ರ ಅಂತ್ಯದೊಳಗೆ ‘ಉತ್ತರಕಾಂಡ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.