ರಿಷಿ ‘ರಾಮನ ಅವತಾರ’ ದರ್ಶನಕ್ಕೆ ರೆಡಿ…

ಮೇ 10ಕ್ಕೆ ‘ರಾಮನ ಅವತಾರ’ ಬಿಡುಗಡೆ
ಒಂದೆಡೆ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರಿದ್ದು, ಹೀಗಾಗಿ ಒಂದಷ್ಟು ಸಿನಿಮಾಗಳ ಬಿಡುಗಡೆ ತಡವಾಗಿದೆ. ಇದೀಗ ರಿಷಿ ಅಭಿನಯದ ‘ರಾಮನ ಅವತಾರ’ ಸಿನಿಮಾವನ್ನು ಚುನಾವಣಾ ಗಡಿಬಿಡಿ ಕಳೆದ ಬಳಿಕ ಆದರೆ, ಚುನಾವಣಾ ಫಲಿತಾಂಶಕ್ಕೆ ಮೊದಲೇ ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿದೆ. ಅಂದಹಾಗೆ, ‘ರಾಮನ ಅವತಾರ’ ಸಿನಿಮಾವು ಇದೇ 2024ರ ಮೇ 10ರಂದು ಬಿಡುಗಡೆಯಾಗಲಿದೆ.
ಚುನಾವಣೆ ರಿಸಲ್ಟ್ ಗೂ ಮೊದ್ಲೆ ರಿಷಿ ಸಿನಿಮಾ ರಿಸೆಲ್ಟ್

ರಿಷಿ ಜೊತೆಗೆ ‘ರಾಮನ ಅವತಾರ’ ಸಿನಿಮಾದಲ್ಲಿ ಪ್ರಣೀತಾ ಸುಭಾಷ್, ಶುಭ್ರ ಅಯ್ಯಪ್ಪ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಉಳಿದಂತೆ ನಟ ಅರುಣ್ ಸಾಗರ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ವಿಕಾಸ್ ಪಂಪಾಪತಿ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್- ಕಟ್ ಹೇಳಿದ್ದಾರೆ.
‘ರಾಮನ ಅವತಾರ’ ಸಿನಿಮಾದ ಶೂಟಿಂಗ್ ಅನ್ನು ಉಡುಪಿ, ಬೆಂಗಳೂರು ಸುತ್ತಮುತ್ತ ಮಾಡಲಾಗಿದೆ. ‘ಸ್ಟಾರ್ ಫ್ಯಾಬ್ ಪ್ರೊಡಕ್ಷನ್’ ಬ್ಯಾನರಿನಲ್ಲಿ ಈ ಹಿಂದೆ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್‌ನ ಈ ಸಿನಿಮಾಕ್ಕೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಹಿಡಿದಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿರುವ ಈ ಸಿನಿಮಾಕ್ಕೆ ಅಮರನಾಥ್ ಸಂಕಲನವಿದೆ.
ಈಗಾಗಲೇ ‘ರಾಮನ ಅವತಾರ’ ಸಿನಿಮಾದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಅದೇ ರೀತಿ ‘ರಾಮನ ಅವತಾರ’ ಸಿನಿಮಾ ಕೂಡ ಸಿನಿಪ್ರೇಕ್ಷಕರಿಗೆ ಥಿಯೇಟರಿನಲ್ಲಿ ಇಷ್ಟವಾಗಲಿದೆ ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ.