ಬೇಡಿಕೆ ಪಡೆದುಕೊಂಡ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ

ಭಾರೀ ಮೊತ್ತಕ್ಕೆ ಸೇಲಾಯ್ತು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಮಲೆಯಾಳಂ ಥಿಯೇಟ್ರಿಕಲ್ ರೈಟ್ಸ್!
ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬಂದಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರದ ಕಡೆಯಿಂದ ಮತ್ತೊಂದು ಖುಷಿಯ ಸಂಗತಿಯೀಗ ಜಾಹೀರಾಗಿದೆ. ಇದರನ್ವಯ ಹೇಳುವುದಾದರೆ, ಮಲೆಯಾಳಂ ಚಿತ್ರರಂಗದಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ದಾಖಲೆ ಬರೆದಿದ್ದಾರೆ. ಭಾರೀ ಮೊತ್ತಕ್ಕೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಮಲೆಯಾಳಂ ಥಿಯೇಟ್ರಿಕಲ್ ರೈಟ್ಸ್ ಸೇಲಾಗಿದೆ! ಮಲೆಯಾಳಂ ಚಿತ್ರರಂಗದಲ್ಲಿ ಇದುವರೆಗೂ ತೆಲುಗು ಸಿನಿಮಾಗಳಿಗೆ ಬಹು ಬೇಡಿಕೆ ಇತ್ತು. ಆ ಜಾಗವನ್ನೀಗ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಮೂಲಕ ಕನ್ನಡ ಚಿತ್ರರಂಗವೂ ಆವರಿಸಿಕೊಂಡಂತಾಗಿದೆ. ಯಾಕೆಂದರೆ, ಮಲೆಯಾಳಂನ ಪ್ರಸಿದ್ಧ ವಿತರಕರೊಬ್ಬರು ಈ ಚಿತ್ರವನ್ನು ವೀಕ್ಷಿಸಿ, ದೊಡ್ಡ ಮೊತ್ತಕ್ಕೆ ಥಿಯೇಟ್ರಿಕಲ್ ರೈಟ್ಸ್ ಪಡೆದುಕೊಂಡಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಜೊತೆಗೇ ಕೇರಳದಲ್ಲಿಯೂ ಬಿಡುಗಡೆಗೊಳ್ಳಲಿದೆ. ಈ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಮಲೆಯಾಳಂ ಭಾಷೆಯಲ್ಲಿಯೂ ದಾಖಲೆ ಬರೆಯಲು ಸಜ್ಜುಗೊಂಡಿದೆ. ಇದರಲ್ಲಿರುವ ಯೂಥ್ ಫುಲ್ ಕಥೆ, ಹೊಸತನಗಳನ್ನು ಮೆಚ್ಚಿಕೊಂಡೇ ಮಲೆಯಾಳಂ ವಿತರಕರು ಥಿಯೇಟ್ರಿಕಲ್ ರೈಟ್ಸ್ ಖರೀದಿ ಮಾಡಿದ್ದಾರಂತೆ. ಈಗ ಮಲೆಯಾಳಂ ಭಾಷೆಯಲ್ಲಿನ ಥಿಯೇಟ್ರಿಕಲ್ ರೈಟ್ಸ್ ವಿಚಾರದಲ್ಲಿಯೂ ಕೂಡಾ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ದಾಖಲೆ ಬರೆದಿದೆ.

‘ಟಿ-ಸೀರಿಸ್ ತೆಕ್ಕೆಗೆ ಆಡಿಯೋ ಹಕ್ಕು!
ಇದರ ಜೊತೆಜೊತೆಗೇ ಈ ಸಿನಿಮಾದ ಆಡಿಯೋ ರೈಟ್ಸ್ ಅನ್ನು ಪ್ರಖ್ಯಾತ ಸಂಸ್ಥೆ ‘ಟಿ-ಸೀರೀಸ್’ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಬಿಡುಗಡೆಯತ್ತ ಮುಖಮಾಡಿ ನಿಂತಿರುವ ಚಿತ್ರತಂಡದ ಪಾಲಿಗಿದು ಅಕ್ಷರಶಃ ಡಬಲ್ ಧಮಾಕ! ಈ ವಿಚಾರವನ್ನು ಖುದ್ದು ಚಿತ್ರತಂಡವೀಗ ಹಂಚಿಕೊಂಡಿದೆ. ಹೇಳಿಕೇಳಿ ಇದು ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಚಿತ್ರ. ಈ ಕಾರಣದಿಂದಲೇ ಹಾಡುಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆಗಳು ಮೂಡಿಕೊಂಡಿವೆ. ಅದಕ್ಕೆ ತಕ್ಕುದಾಗಿಯೇ ಚಿತ್ರತಂಡ ಹಾಡುಗಳನ್ನು ರೂಪಿಸಿದೆಯಂತೆ. ವೀಡಿಯೋ ಸಾಂಗುಗಳನ್ನೂ ನೋಡಿದ ಬಳಿಕ ಅತ್ಯಂತ ಖುಷಿಯಿಂದ ಟಿ ಸೀರೀಸ್ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಹಾಡುಗಳ ಹಕ್ಕನ್ನು ದೊಡ್ಡ ಮೊತ್ತಕ್ಕೆ ಖರೀಓದಿಸಿದೆ. ಈ ಮಾತುಕತೆಗಳೆಲ್ಲವೂ ಮುಂಬೈನಲ್ಲಿರುವ ಟಿ ಸೀರೀಸ್ ಸಂಸ್ಥೆಯ ಮುಖ್ಯ ಕಚೇರಿಯಲ್ಲಿಯೇ ನೆರವೇರಿದೆ.
ಇನ್ನುಳಿದಂತೆ ಸದ್ಯಕ್ಕೆ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಬ್ಯುಸಿಯಾಗಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಕಾಂತ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.