ಕ್ರೈಂ-ಥ್ರಿಲ್ಲರ್ ‘ಇತ್ಯಾದಿ’ ಥಿಯೇಟರಿಗೆ ಬರಲು ರೆಡಿ

ಹೊಸಬರ ಮರ್ಡರ್ ಮಿಸ್ಟ್ರಿ ಕಥನ
‘ಚರಣ್‌ದೇವ್ ಕ್ರಿಯೇಶನ್ಸ್’, ‘ಅದ್ವೈತ ಫಿಲಿಂಸ್’ ಮತ್ತು ‘ನೀಲಕಂಠ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಮಹೇಂದ್ರನ್, ಶ್ರೀನಿವಾಸ್ ಮತ್ತು ನೀಲಕಂಠನ್ ಜಂಟಿಯಾಗಿ ನಿರ್ಮಾಣ ಮಾಡಿರುವ ‘ಇತ್ಯಾದಿ’ ಸಿನಿಮಾ ಇದೇ 2024 ರ ಏಪ್ರಿಲ್ 26 ರಂದು ತೆರೆಗೆ ಬರುತ್ತಿದೆ.
ಸಿನಿಮಾ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ‘ಇತ್ಯಾದಿ’ ಸಿನಿಮಾದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.
ಮೊದಲಿಗೆ ಸಿನಿಮಾಗೆ ನಿರ್ದೇಶನ ಮಾಡಿರುವ ಡಿ. ಯೋಗರಾಜ್ ಹೇಳುವಂತೆ, ಇದೊಂದು ಮರ್ಡರ್ ಮಿಸ್ಟ್ರಿ ಕ್ರೈಂ ಥ್ರಿಲ್ಲರ್ ಕಥೆಯನ್ನು ಒಳಗೊಂಡಿರುವ ಸಿನಿಮಾ. ಶೇಕಡ 75ರಷ್ಟು ಕಾಲ್ಪನಿಕ, ಉಳಿದವು ಸತ್ಯ ಘಟನೆಯಾಗಿರುತ್ತದೆ. ‘ಶೃಂಗೇರಿ ಬಳಿ ಇರುವ ಬಿಳಿಗದ್ದೆ ಎಂಬ ಊರಿನಲ್ಲಿ ಕಲ್ಲು ದೇವರು ಇರುತ್ತದೆ. ಅದಕ್ಕೆ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕೆಂಬ ಆಸೆಯಾಗಿರುತ್ತದೆ. ಅದು ಕೊನೆಗೂ ಕಲ್ಲಾಗೇ ಹುಟ್ಟಿಕೊಂಡಿರುತ್ತದೆ. ಊರಿನಲ್ಲಿರುವ ಗರ್ಭಣಿಯರು ಆ ಜಾಗಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇರುತ್ತದೆ. ಆದರೆ ಅಲ್ಲಿಗೆ ಹೋದವರೆಲ್ಲಾ ಕೊಲೆಯಾಗುತ್ತಿರುತ್ತಾರೆ. ಇದನ್ನು ಮಾಡುವವರು ಯಾರು? ಯಾಕೆ ನಡೀತಾ ಇದೆ? ಎಂಬುದನ್ನು ಕುತೂಹಲಕಾರಿಯಾಗಿ ತೋರಿಸಲಾಗಿದೆ’ ಎಂದು ಸಿನಿಮಾದ ಕಥಾಹಂದರ ಬಿಚ್ಚಿಟ್ಟರು.
ಹೊಸಪ್ರತಿಭೆಗಳ ಹೊಸ ಪ್ರಯತ್ನ ’ಇತ್ಯಾದಿ’ ಏ. 26ಕ್ಕೆ ತೆರೆಗೆ

‘ಇತ್ಯಾದಿ’ ಸಿನಿಮಾವನ್ನು ಶೃಂಗೇರಿ, ಚಿಕ್ಕಮಗಳೂರು, ಆಗುಂಬೆ ಸುಂದರ ತಾಣಗಳಲ್ಲಿ ಸುಮಾರು 62 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ‘ಇತ್ಯಾದಿ’ ಸಿನಿಮಾದಲ್ಲಿ ಸಿನಿಮಾದಲ್ಲಿ ಸಚಿನ್ ನಾಯಕನಾಗಿ ಡಾ. ಸೌಮ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಹೇಶ್. ಬಿ., ಅರ್ಚನಾ ಉದಯಕುಮಾರ್, ಅಂಜನಪ್ಪ, ತಮಿಳು ಖ್ಯಾತ ನಟ ಶಿವರಾಜ್, ಮಂಜುಳಾ ವೆಂಕಟೇಶ್, ಮಣಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿಯಸಿದ್ದಾರೆ.
‘ಇತ್ಯಾದಿ’ ಸಿನಿಮಾದ ಎರಡು ಹಾಡುಗಳಿಗೆ ಪುಣ್ಯೇಶ್ ಸಂಗೀತ ಸಂಯೋಜಿಸಿದ್ದು, ಭರಣಿ, ಡಿ. ಯೋಗರಾಜ್, ಲಕ್ಷ್ಮೀಕಾಂತ್ ಛಾಯಾಗ್ರಹಣವಿದೆ. ಸಿನಿಮಾಕ್ಕೆ ಸಂತೋಷ್ ಸಂಕಲನವಿದೆ. ಈಗಾಗಲೇ ಸಿನಿಮಾ ಸೆನ್ಸಾರ್‌ನಿಂದ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದು, ಸಿನಿಮಾ ಹೇಗಿದೆ ಎಂಬುದು ಇದೇ ಏಪ್ರಿಲ್ ಕೊನೆಯೊಳಗೆ ಗೊತ್ತಾಗಲಿದೆ.