ಕನ್ನಡಕ್ಕೊಬ್ಬ ಭರವಸೆಯ ನಟ ವಿಕ್ರಮ್

‘ಇತ್ಯಾದಿ’ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಬಿಗ್ ಸ್ಕ್ರೀನ್ ಗೆ ಎಂಟ್ರಿ
ಕನ್ನಡ ಚಿತ್ರರಂಗದಲ್ಲಿ ಪ್ರತಿವಾರ ನಾಲ್ಕಾರು ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಇಂಥ ಹೊಸ ಸಿನಿಮಾಗಳ ಮೂಲಕ ಹತ್ತಾರು ಹೊಸ ಕಲಾವಿದರು, ತಂತ್ರಜ್ಞರು ಚಿತ್ರರಂಗಕ್ಕೆ ಪರಿಚಯವಾಗುತ್ತಲೇ ಇರುತ್ತಾರೆ. ಲೋಕಸಭಾ ಚುನಾವಣೆಯ ಅಬ್ಬರದ ನಡುವೆಯೇ ಈ ವಾರ (ಏ. 26 ರಂದು) ಕೂಡ ಇಂಥದ್ದೇ ಒಂದು ಹೊಸ ಸಿನಿಮಾ ‘ಇತ್ಯಾದಿ’ ತೆರೆ ಕಾಣುತ್ತಿದ್ದು, ಈ ಸಿನಿಮಾದ ಮೂಲಕ ಯುವನಟ ವಿಕ್ರಮ್ ನಾಯಕ ನಟನಾಗಿ ಬೆಳ್ಳಿತೆರೆಗೆ ಗ್ರ್ಯಾಂಡ್ ಆಗಿ ಎಂಟ್ರಿಯಾಗುತ್ತಿದ್ದಾರೆ.
ಇನ್ನು ವಿಕ್ರಮ್ ಬಗ್ಗೆ ಹೇಳುವುದಾದರೆ, ಮಧ್ಯಮ ಕುಟುಂಬದ ಹಿನ್ನೆಲೆಯ ವಿಕ್ರಮ್ ಬಾಲ್ಯದಿಂದಲೇ ಸಿನಿಮಾದ ಕಡೆಗೆ ಆಸಕ್ತಿ ಬೆಳೆಸಿಕೊಂಡ ಹುಡುಗ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಸಿನಿಮಾ, ಮಾಡೆಲಿಂಗ್ ನಂಟು ಬೆಳೆಸಿಕೊಂಡ ವಿಕ್ರಮ್, ತನ್ನ 21ನೇ ವಯಸ್ಸಿನಲ್ಲೇ ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಪ್ರತಿಭೆ. ಆರಂಭದಲ್ಲಿ ಒಂದಷ್ಟು ಧಾರಾವಾಹಿಗಳು, ಸಿನಿಮಾಗಳು, ಆಲ್ಬಂಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡ ವಿಕ್ರಮ್ ಇದೀಗ ‘ಇತ್ಯಾದಿ’ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಚಿತ್ರದಲ್ಲಿ ಖಾಕಿ ತೊಟ್ಟ ವಿಕ್ರಮ್
ಅಂದಹಾಗೆ, ಮರ್ಡರ್ ಮಿಸ್ಟ್ರಿ ಕಥಾಹಂದರ ಹೊಂದಿರುವ ‘ಇತ್ಯಾದಿ’ ಸಿನಿಮಾದಲ್ಲಿ ವಿಕ್ರಮ್ ಮೊದಲ ಬಾರಿಗೆ ಖಡಕ್ ಖಾಕಿ ತೊಟ್ಟು ಪೊಲೀಸ್ ಅಧಿಕಾರಿ ಗೆಟಪ್ ನಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.
‘ಇತ್ಯಾದಿ’ ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡುವ ವಿಕ್ರಮ್, ‘ಇದೊಂದು ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಇದರಲ್ಲಿ ವಿಶೇಷ ಪೊಲೀಸ್ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತನ್ನ ಸ್ವಂತ ಊರಿಗೆ ಅಪಾಯಿಂಟ್ ಆಗಿ ಬರುವ ಪೊಲೀಸ್ ಅಧಿಕಾರಿ ನಡೆದಿರುವ ಕ್ರೈಂನ ಹಿಂದಿರುವ ಕಾಣದ ಕೈಗಳನ್ನು ಹೇಗೆ ಹುಡುಕುತ್ತಾನೆ ಎಂಬುದು ನನ್ನ ಪಾತ್ರ. ಇಡೀ ಸಿನಿಮಾದ ಕಥೆ ನನ್ನ ಪಾತ್ರದ ಸುತ್ತ ಸಾಗುತ್ತದೆ’ ಎಂದು ಪಾತ್ರ ಪರಿಚಯ ಮಾಡಿಕೊಡುತ್ತಾರೆ.
’ಇತ್ಯಾದಿ’ ಮೇಲೆ ವಿಕ್ರಮ್ ನಿರೀಕ್ಷೆ…
‘ಡಿ. ಯೋಗರಾಜ್ ನಿರ್ದೇಶನ, ನಿರ್ಮಾಪಕ ಮಹೇಂದ್ರನ್ ನಿರ್ಮಾಣದಲ್ಲಿ ‘ಇತ್ಯಾದಿ’ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಮನರಂಜನೆಯ ಜೊತೆಗೆ ಒಂದೊಳ್ಳೆ ಮೆಸೇಜ್ ಕೂಡ ಸಿನಿಮಾದಲ್ಲಿದೆ. ಬಿಡುಗಡೆಗೂ ಮೊದಲೇ ‘ಇತ್ಯಾದಿ’ ಸಿನಿಮಾದ ಬಗ್ಗೆ ಮತ್ತು ನನ್ನ ಪಾತ್ರದ ಬಗ್ಗೆ ನಿರೀಕ್ಷೆಯ ಮಾತುಗಳು ಕೇಳಿಬರುತ್ತಿದ್ದು, ‘ಇತ್ಯಾದಿ’ ಥಿಯೇಟರಿನಲ್ಲೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತು ವಿಕ್ರಮ್ ಅವರದ್ದು.
‘ಇತ್ಯಾದಿ’ ಸಿನಿಮಾದ ಬಳಿಕ ನಟ ತೇಜ್ ಅಭಿನಯಿಸಿ, ನಿರ್ದೇಶಿಸುತ್ತಿರುವ ಹೊಸ ಸಿನಿಮಾ ‘ಡ್ಯೂಡ್’ ನಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾ ಕೂಡ ಈ ವರ್ಷಾಂತ್ಯದಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.