Pop Corner

‘ಕೋಟಿ’ಯ ಖಳನಾಯಕ: ದಿನೂ ಸಾವ್ಕಾರ್

‘ಕೋಟಿ’ ಕತೆಯ ಖಳನಾಯಕ ದಿನೂ ಸಾವ್ಕಾರ್ ಫೋಟೋ ಬಿಡುಗಡೆ

ಬೆಳ್ಳಗೆ ನೆರೆತ ಕೂದಲು, ಗಡ್ಡ, ಮೀಸೆ, ಕುತ್ತಿಗೆಗೊಂದು ಚೈನು, ಬಾಯಲ್ಲೊಂದು ಸಿಗರೇಟು, ಕಣ್ಣಲ್ಲಿ ಯಾರದೋ ಜೀವನವನ್ನು ಬುಡಮೇಲು ಮಾಡುವ ಸಂಚು. ಇದು ಇತ್ತೀಚೆಗೆ ಬಿಡುಗಡೆಯಾಗಿರುವ ಡಾಲಿ ಧನಂಜಯ್‌ ನಾಯಕನಾಗಿ ಅಭಿನಯಿಸುತ್ತಿರುವ ʼಕೋಟಿʼ ಸಿನಿಮಾದ ಖಳನಾಯಕನ ಫಸ್ಟ್‌ ಲುಕ್‌ ಪೋಸ್ಟರ್‌. ಹೌದು, ʼಕೋಟಿʼ ಸಿನಿಮಾದಲ್ಲಿ ನಟ ಕಂ ನಿರ್ದೇಶಕ ರಮೇಶ್‌ ಇಂದಿರಾ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನೂ ಸಾವ್ಕಾರ್‌ ಎಂಬ ಖಳನಾಯಕನ ಪಾತ್ರದಲ್ಲಿ ನಟ ರಮೇಶ್‌ ಇಂದಿರಾ ಅಭಿನಯಿಸುತ್ತಿದ್ದು, ಸದ್ಯ ಬಿಡುಗಡೆಯಾಗಿರುವ ʼಕೋಟಿʼ ಸಿನಿಮಾದ ಖಡಕ್‌ ವಿಲನ್‌ ಪೋಸ್ಟರ್‌ ಸಿನಿಮಾಕ್ಕೆ ಹೊಸದೊಂದು ಎನರ್ಜಿ ತಂದಂತೆ ಕಾಣಿಸುತ್ತಿದೆ.

ಖಳನಟನ ಬಗ್ಗೆ ಮೂಡಿದ ಕುತೂಹಲ
ʼಕೋಟಿʼ ಸಿನಿಮಾದ ಟೀಸರ್‌ ಬಿಡುಗಡೆ ಆದಾಗಿಂದ ಖಳನಾಯಕ ದಿನೂ ಸಾವ್ಕಾರ್‌ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಲೇ ಹೋಗಿದೆ. ಸಾವ್ಕಾರ್‌ ಮತ್ತು ʼಕೋಟಿʼಯ ಟಕ್ಕರ್‌ ನೋಡುವುದಕ್ಕೆ ಇದು ಅತೀವ ಆಸಕ್ತಿಯನ್ನು ಹುಟ್ಟುಹಾಕಿರುವುದಂತೂ ಸತ್ಯ. ಅದಕ್ಕೆ ಕಾರಣ ಸಾವ್ಕಾರ್‌ ಪಾತ್ರದಲ್ಲಿ ರಮೇಶ್‌ ಇಂದಿರಾ ಕಾಣಿಸಿಕೊಂಡಿರುವ ರೀತಿ. ಜೋರಾಗಿ ಮಳೆ ಸುರಿಯುತ್ತಿರುವಾಗ, ಹುಡುಗರೆಲ್ಲಾ ಕೊಡೆ ಹಿಡಿದಿರುವಾಗ ಕಾರಿಂದ ಇಳಿಯುತ್ತಿರುವ ಸಾವ್ಕಾರ್‌ ಚಿತ್ರ ಮತ್ತು ಹಿನ್ನೆಲೆ ಸಂಗೀತದ ಬಗ್ಗೆ ಈಗಾಗಲೇ ಚಿತ್ರ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗಿರುವುದಂತೂ ನಿಜ.

ವಿಲನ್‌ ಬಗ್ಗೆ ಸೆಳೆತ ನಿರ್ದೇಶಕ ಪರಮ್‌ ಏನಂತಾರೆ? 
ಕತೆಯಲ್ಲಿ ವಿಲನ್ನುಗಳು ಹೇಗೆ ತಮ್ಮನ್ನು ಆಕರ್ಷಿಸುತ್ತಾರೆ ಎನ್ನುವುದರ ಬಗ್ಗೆ ಕೋಟಿ ಸಿನಿಮಾದ ಬರಹಗಾರ ಮತ್ತು ನಿರ್ದೇಶಕ ಪರಮ್‌ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. “ಸುಯೋಧನ ಇಲ್ಲದ ಮಹಾಭಾರತ ಇಲ್ಲ. ರಾವಣನಿಲ್ಲದ ರಾಮಾಯಣವಿಲ್ಲ. ಮನಸ್ಸಿನ ಆಳದಲ್ಲಿ ಹುದುಗಿರುವ ಆಸೆಗಳನ್ನು ಈ ಪಾತ್ರಗಳು ನಮಗೆ ಭೇಟಿ ಮಾಡಿಸುತ್ತವೆ. ಇಷ್ಟ ಇಲ್ಲ ಎಂದು ಎಷ್ಟೇ ಹೇಳಿದರೂ ಖಳನಾಯಕರ ಪಾತ್ರಕ್ಕೆ ಅದೇನೋ ಸೆಳೆತ ಇದೆ. ಇಲ್ಲದಿದ್ದರೆ ರಾವಣನ ಲಂಕೆ ಸುಭಿಕ್ಷವಾಗಿತ್ತು ಎಂದು ಓದಿದಾಗ ಯಾಕೆ ಖುಷಿಯಾಗಬೇಕು? ಸುಯೋಧನ ಮತ್ತು ಕರ್ಣನ ನಡುವಿನ ಗೆಳೆತವನ್ನು ನೋಡಿ ಯಾಕೆ ನಾವು ಭಾವುಕರಾಗಬೇಕು? ಕತೆಯನ್ನು ಮುಂದೆ ತೆಗೆದುಕೊಂಡು ಹೋಗುವವನು, ನಾಯಕನ ಮೌಲ್ಯಗಳನ್ನು ಪ್ರಶ್ನಿಸುವವನು, ಕತೆಗೊಂದು ಎನರ್ಜಿ ಕೊಡುವವನು ಖಳನಾಯಕ!ʼ ಎಂದು ಬರೆದುಕೊಂಡಿದ್ದಾರೆ ಪರಮ್.

ಸ್ವಲ್ಪ ಅನ್‌ ಸ್ಟೇಬಲ್!
ತಮ್ಮ ಸಿನಿಮಾದ ಖಳನಟನ ಪಾತ್ರವನ್ನು ಅವರು ವಿವರಿಸಿರುವ ರೀತಿಯಿಂದ ಈ ಪಾತ್ರದ ಸುತ್ತ ಇರುವ ಎಕ್ಸೈಟ್ಮೆಂಟ್‌ ಇನ್ನಷ್ಟು ಜಾಸ್ತಿಯಾಗಿದೆ. ʼಕೋಟಿಯ ಖಳನಾಯಕನ ಹೆಸರು ದಿನೂ ಸಾವ್ಕಾರ್.‌ ರಣತಂತ್ರದಲ್ಲಿ ಎತ್ತಿದ ಕೈ. ಬುದ್ಧಿವಂತ. ಸ್ವಲ್ಪ ಅನ್‌ ಸ್ಟೇಬಲ್.‌ ತಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂದುಕೊಂಡಿರುವ ವ್ಯಕ್ತಿ. ಮಾತು ಕೇಳದವರನ್ನು ಕೇಳಿಸುತ್ತೇನೆ ಎನ್ನುವುದನ್ನು ನಂಬಿದವನು. ಸಿಕ್ಕಾಪಟ್ಟೆ ಮಜಾ ಕೊಡುವ ಪಾತ್ರ ದಿನೂ ಸಾವ್ಕಾರ್ರದು. ರಮೇಶ್‌ ಇಂದಿರಾ ಈ ಪಾತ್ರವನ್ನು ನಿಭಾಯಿಸಿದ ರೀತಿ ನೋಡಿ ನಾನು ಆಲ್ಮೋಸ್ಟ್‌ ಗಾಬರಿಯಾಗಿದ್ದೇನೆʼ ಎಂದು ಅವರು ಬರೆದಿದ್ದಾರೆ.
ಇದೇ ಜೂನ್‌ ೧೪ರಂದು ಕೋಟಿ ಸಿನಿಮಾ ಬಿಡುಗಡೆ ಆಗಲಿದೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!