ರವಿಚಂದ್ರನ್ ʼದ ಜಡ್ಜ್‌ಮೆಂಟ್ʼಗೆ ಕೌಂಟ್ ಡೌನ್!

ಲೀಗಲ್-ಥ್ರಿಲ್ಲರ್ ಶೈಲಿಯ ಕೋರ್ಟ್ ರೂಂ ಡ್ರಾಮಾ!
ಹೊಸ ಗೆಟಪ್‌ನಲ್ಲಿ ಎಂಟ್ರಿಯಾಗುತ್ತಿದ್ದಾರೆ ಕ್ರೇಜಿಸ್ಟಾರ್
ʼಯುದ್ಧಕಾಂಡʼ ಸಿನಿಮಾದಲ್ಲಿ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಯುವ ವಕೀಲ (ಲಾಯರ್)ನ ಗೆಟಪ್ ನಲ್ಲಿ ಮಿಂಚಿದ್ದು ಅನೇಕರಿಗೆ ಗೊತ್ತಿರಬಹುದು. ರವಿಚಂದ್ರನ್ ಅವರ ಈ ಗೆಟಪ್, ಅವರ ಡೈಲಾಗ್ಸ್, ಮ್ಯಾನರಿಸಂ ಎಲ್ಲವೂ 90ರ ದಶಕದಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ʼಯುದ್ದಕಾಂಡʼ ಸಿನಿಮಾದಲ್ಲಿ ರವಿಚಂದ್ರನ್ ನಿರ್ವಹಿಸಿದ್ದ ವಕೀಲನ ಪಾತ್ರ ಸಾಕಷ್ಟು ಜನಪ್ರಿಯವಾಗಿದ್ದರೂ, ಮತ್ತೆಂದೂ, ರವಿಚಂದ್ರನ್ ಅಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಹೌದು, ʼಯುದ್ದಕಾಂಡʼ ಸಿನಿಮಾ ಬಿಡುಗಡೆಯಾಗಿದ್ದು, 1989ರಲ್ಲಿ. ಅದಾದ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಕರಿಕೋಟು ತೊಟ್ಟು ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದು ತುಂಬ ಅಪರೂಪ. ಇದೀಗ ಸುಮಾರು ಮೂರುವರೆ ದಶಕಗಳ ಬಳಿಕ ರವಿಚಂದ್ರನ್, ಮತ್ತೊಮ್ಮೆ ಕರಿ ಕೋಟು ಧರಿಸಿ ಔಟ್ ಆ್ಯಂಡ್ ಔಟ್ ಕ್ಲಾಸ್ ಲುಕ್ ನಲ್ಲಿ ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಮತ್ತೆ ಕರಿಕೋಟು ತೊಟ್ಟ ʼರವಿಮಾಮʼ
ನಟ ಕಂ ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್ 1990ರ ದಶಕದಲ್ಲಿ ಲವ್ ಕಂ ರೊಮ್ಯಾಂಟಿಕ್ ಸಿನಿಮಾಗಳಿಂದಲೇ ಜನಪ್ರಿಯತೆ ಪಡೆದುಕೊಂಡವರು. ಲವರ್ ಬಾಯ್ ಗೆಟಪ್ ನಲ್ಲಿ ಸಾಲು ಸಾಲು ಲವ್ ಕಂ ರೊಮ್ಯಾಂಟಿಕ್ ಸಿನಿಮಾಗಳ ನಡುವೆ ಅಲ್ಲೊಂದು, ಇಲ್ಲೊಂದು ಹೊಸಥರದ ಗೆಟಪ್‌ನ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರೂ, ಮುಂದೆ ಅಂಥ ಪ್ರಯೋಗದ ಪಾತ್ರಗಳಲ್ಲಿ ʼರವಿಮಾಮʼ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ರವಿಚಂದ್ರನ್ ಅವರ ಸಿನಿಮಾ ಕೆರಿಯರ್‌ನ ಎವರ್‌ಗ್ರೀನ್ ಪಾತ್ರಗಳ ಪೈಕಿ ಒಂದಾಗಿರುವ ಅಡ್ವೋಕೆಟ್ ಪಾತ್ರವನ್ನು ಮತ್ತೊಮ್ಮೆ ʼದ ಜಡ್ಜ್‌ಮೆಂಟ್ʼ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ ನಿರ್ದೇಶಕ ಗುರುರಾಜ ಬಿ. ಕುಲಕರ್ಣಿ (ನಾಡಗೌಡ)
ʼದ ಜಡ್ಜ್‌ಮೆಂಟ್ʼ ಎಂಬ ಲೀಗಲ್-ಥ್ರಿಲ್ಲರ್ ಚಿತ್ರ
ಅಂದಹಾಗೆ, ʼದಿ ಜಡ್ಜ್‌ಮೆಂಟ್ʼ ಲೀಗಲ್-ಥ್ರಿಲ್ಲರ್ ಶೈಲಿಯ ಸಿನಿಮಾ. ʼಜಿ9 ಕಮ್ಯುನಿಕೇಶನ್ ಮೀಡಿಯಾ ಆ್ಯಂಡ್ ಎಂಟರ್‌ಟೈನ್ಮೆಂಟ್ʼ ಬ್ಯಾನರಿನಲ್ಲಿ ಶರದ ಬಿ. ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ, ರಾಜೇಶ್ವರಿ ಆರ್. ಸುನೀಲ್, ಪ್ರತಿಮಾ ಬಿರಾದರ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ರವಿಚಂದ್ರನ್ ಅವರಿಗೆ ಮೇಘನಾ ಗಾಂವ್ಕರ್ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ದಿಗಂತ್, ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಾಸ್ವಾಮಿ, ರವಿಶಂಕರ್ ಗೌಡ, ಬಾಲಾಜಿ ಮನೋಹರ್, ಸುಜಯ್ ಶಾಸ್ತ್ರೀ, ರೇಖಾ ಕೂಡ್ಲಿಗಿ, ರೂಪಾ ರಾಯಪ್ಪ, ಸಂಪತ್ ಹೀಗೆ ಬೃಹತ್ ಕಲಾವಿದರ ತಾರಾಗಣವೇ ಸಿನಿಮಾದಲ್ಲಿದೆ.
ಮೇ 24ಕ್ಕೆ ಥಿಯೇಟರಿನಲ್ಲಿ ʼದ ಜಡ್ಜ್‌ಮೆಂಟ್ʼ
ಈಗಾಗಲೇ ʼದ ಜಡ್ಜ್‌ಮೆಂಟ್ʼ ಸಿನಿಮಾದ ಪೋಸ್ಟರ್, ಟೀಸರ್, ಹಾಡುಗಳು ಬಿಡುಗಡೆಯಾಗಿದ್ದು ಸಿನಿಮಾ ಇದೇ ಮೇ. 24 ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ʼದ ಜಡ್ಜ್‌ಮೆಂಟ್ʼ ಸಿನಿಮಾದ ಪೋಸ್ಟರ್, ಟೀಸರ್, ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ʼದಿ ಜಡ್ಜ್‌ಮೆಂಟ್ʼ ಸಿನಿಮಾ ಥಿಯೇಟರಿನಲ್ಲೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾದಲ್ಲಿದೆ. ಬಹುಕಾಲದ ನಂತರ ಕರಿಕೋಟು ತೊಟ್ಟು ಬರುತ್ತಿರುವ ರವಿಚಂದ್ರನ್ ಎಷ್ಟರ ಮಟ್ಟಿಗೆ ಅಭಿಮಾನಿಗಳ ಮನ ಗೆಲ್ಲಲಿದ್ದಾರೆ ಎಂಬುದು ಮೇ ತಿಂಗಳ ಕೊನೆಗೆ ಗೊತ್ತಾಗಲಿದೆ.