‘ಗಾಡ್ ಪ್ರಾಮಿಸ್’ ಸಿನಿಮಾಗೆ ಮುಹೂರ್ತ

ಕುಂದಾಪುರದ ಆನೆಗುಡ್ಡೆ ಗಣಪತಿ ದೇಗುಲದಲ್ಲಿ ‘ಗಾಡ್ ಪ್ರಾಮಿಸ್’ ಸಿನಿಮಾದ ಮುಹೂರ್ತ
ಸೂಚನ್ ಶೆಟ್ಟಿ ಹೊಸ ಪ್ರಯತ್ನಕ್ಕೆ ಪ್ರಮೋದ್ ಶೆಟ್ಟಿ ಹಾಗೂ ರವಿ ಬಸ್ರೂರು ಸಾಥ್
ಯುವ ಪ್ರತಿಭೆ ಸೂಚನ್ ಶೆಟ್ಟಿ ನಟಿಸಿ ಮತ್ತು ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾ ʼಗಾಡ್ ಪ್ರಾಮಿಸ್ʼಗೆ ಮುನ್ನುಡಿ ಸಿಕ್ಕಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಆನೆಗುಡ್ಡದ ಗಣಪತಿ ದೇಗಲುದಲ್ಲಿ ಇತ್ತೀಚೆಗೆ ಸಿನಿಮಾದ ಮುಹೂರ್ತ ನೆರವೇರಿತು. ನಟ ಪ್ರಮೋದ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಸೂಚನ್ ಕನಸಿನ ಚೊಚ್ಚಲ ಸಿನಿಮಾಕ್ಕೆ ಸಾಥ್ ಕೊಟ್ಟರು. ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರು, ʼಗಾಡ್ ಪ್ರಾಮಿಸ್ʼ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರೆ, ನಟ ಪ್ರಮೋದ್ ಶೆಟ್ಟಿ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ʼಗಾಡ್ ಪ್ರಾಮಿಸ್ʼ ಎಂಬ ಫ್ಯಾಮಿಲಿ ಡ್ರಾಮಾ
ಮುಹೂರ್ತದ ವೇಳೆ ಮಾತನಾಡಿದ ನಿರ್ದೇಶಕ ಸೂಚನ್ ಶೆಟ್ಟಿ, ʼಕಳೆದ ಆರೇಳು ತಿಂಗಳಿನಿಂದ ʼಗಾಡ್ ಪ್ರಾಮಿಸ್ʼ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸ ಶುರು ಮಾಡಿದ್ದೇವೆ. 2015ರಿಂದ ರವಿ ಬಸ್ರೂರು ಜೊತೆ ಕೆಲಸ ಮಾಡುತ್ತಿದ್ದೇನೆ. ರವಿ ಸರ್ ಗೆ ನನಗೆ ಗುರುಗಳು. ಡೈರೆಕ್ಟನ್ ತಂಡದ ಜೊತೆಗೆ ʼಕಟಕʼ, ʼಗಿರ್ಮಿಟ್ʼ ಸಿನಿಮಾಗಳ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದೆ. ಹೀಗಾಗಿ ಆ ಅನುಭವದ ಇಟ್ಟುಕೊಂಡು ನಿರ್ದೇಶನಕ್ಕೆ ಇಳಿದಿದ್ದೇನೆ. ಈಗ ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಇಡೀ ಸಿನಿಮಾದ ಚಿತ್ರೀಕರಣ ಕುಂದಾಪುರ ಸುತ್ತಮುತ್ತ ನಡೆಯಲಿದೆ. ಸಿನಿಮಾ ಫ್ಯಾಮಿಲಿ ಡ್ರಾಮಾ ಕಥೆಯನ್ನು ಒಳಗೊಂಡಿದೆ. ಆಡಿಷನ್ ನಡೆಸಿದ್ದೇವೆ. ಸಿನಿಮಾದಲ್ಲಿ ಕಲಾವಿದರಾಗಿ ಯಾರು ಆಯ್ಕೆಯಾಗಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆʼ ಎಂದರು.
ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಾತನಾಡಿ, ʼಒಂದು ಸಿನಿಮಾ ಮಾಡುವುದರಿಂದ ಎಷ್ಟೋ ಜನ ಕಲಾವಿದರ ಭವಿಷ್ಯ ನಿರ್ಧಾರವಾಗುತ್ತದೆ. ನಮ್ಮ ಕರಾವಳಿಯವರಿಗೆ ಒಳ್ಳೆ ಫ್ಲಾಟ್ ಫಾರಂ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ನಮ್ಮ ಜೊತೆ ಬಂದವರಿಗೆ ಎಲ್ಲಾ ಕೆಲಸ ಕಲಿಯಿರಿ ಎಂದು ಹೇಳುತ್ತೇನೆ. ಇದೇ ರೀತಿ ಎಲ್ಲರೂ ಎಲ್ಲಾ ವಿಭಾಗ ಕಲಿರಿ. ಒಂದು ಸಿನಿಮಾದಿಂದ ಎಷ್ಟೋ ಜನರ ಬದುಕು ಹಸನಾಗಲಿ. ಇವರ ರೀತಿ ನಮ್ಮ ಭಾಗದಲ್ಲಿ ನೂರಾರು ಸಿನಿಮಾಗಳು ಆಗಲಿ. ಇಡೀ ತಂಡಕ್ಕೆ ಒಳ್ಳೆದಾಗಲಿʼ ಎಂದು ಹಾರೈಸಿದರು.
ನಟ ಪ್ರಮೋದ್ ಶೆಟ್ಟಿ ಮಾತನಾಡಿ, ʼಸೂಚನ್ ಯಾವುದೇ ಕೆಲಸ ಮಾಡಿದ್ರೂ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತಾನೆ. ನಟನೆ, ನಿರ್ದೇಶನ ಎರಡು ಒಟ್ಟಿಗೆ ಮಾಡುತ್ತಿರುವುದರಿಂದ ಎಲ್ಲರೂ ಒಟ್ಟಿಗೆ ಸೇರಿ ಮುಂದುವರೆಯಲಿ. ಒಂದೊಳ್ಳೆ ತಂಡವಾಗಿ ಹೊರಹೊಮ್ಮಲಿ. ನನ್ನ ಪ್ರಕಾರ ಈ ಸಿನಿಮಾ ತುಂಬಾ ಚೆನ್ನಾಗಿ ಬರಲಿದೆ ಎಂಬ ಭರವಸೆ ಇದೆ. ಒಳ್ಳೆ ಬಜೆಟ್ ಕೂಡ ಇದೆ. ಸೂಚನ್ ನಮ್ಮ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾನೆ. ಇಡೀ ತಂಡದ ಮೇಲೆ ನಿಮ್ಮ ಬೆಂಬಲ ಇರಲಿದೆʼ ಎಂದು ಹೇಳಿದರು.
ನಿರ್ಮಾಪಕ ಮೈತ್ರಿ ಮಂಜುನಾಥ್ ಮಾತನಾಡಿ, ʼನಾವು ಈ ಹಿಂದೆ ʼಹಫ್ತಾʼ ಸಿನಿಮಾ ಮಾಡಿದ್ದೇವೆ. ಇದು ನನ್ನ ಎರಡನೇ ಸಿನಿಮಾ. ʼಗಾಡ್ ಪ್ರಾಮಿಸ್ʼ ಸಿನಿಮಾದ ಸ್ಕ್ರೀಪ್ಟ್ ತುಂಬಾ ಚೆನ್ನಾಗಿದೆ. ಒಳ್ಳೆ ಅನುಭವ ತಂಡದೊಂದಿಗೆ ಕೈ ಜೋಡಿಸಿದೆʼ ಎಂದರು.
ಚಿತ್ರೀಕರಣದತ್ತ ಮುಖ ಮಾಡಿದ ʼಗಾಡ್ ಪ್ರಾಮಿಸ್ʼ
ʼಗಾಡ್ ಪ್ರಾಮಿಸ್ʼ ಸಿನಿಮಾ ಮೂಲಕ ಸೂಚನ್ ಶೆಟ್ಟಿ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಅವರ ಹೊಸ ಪಯಣಕ್ಕೆ ಮೈತ್ರಿ ಮಂಜುನಾಥ್ ನಿರ್ಮಾಪಕರಾಗಿ ಬಲ ತುಂಬಿದ್ದಾರೆ. ಚಿತ್ರವನ್ನು ʼಮೈತ್ರಿ ಪ್ರೊಡಕ್ಷನ್ʼ ನಡಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ʼಹಫ್ತಾʼ ಸಿನಿಮಾವನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು. ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಸಿನಿಮಾಗೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭರತ್ ಮಧುಸೂದನನ್ ಸಂಗೀತ ನಿರ್ದೇಶನ, ನವೀನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.