ಥಿಯೇಟರ್ ಬದಲು ಓಟಿಟಿಗೇ ಬಂತು ʼಎಂಥಾ ಕಥೆ ಮಾರಾಯಾʼ!

ಚಿತ್ರಮಂದಿರಕ್ಕೆ ಬಾರದೇ, ನೇರವಾಗಿ ಪ್ರೇಕ್ಷಕರ ಮುಂದೆ ಬಂದ ಸಿನಿಮಾ
ಸಾಮಾನ್ಯವಾಗಿ ಸಿನಿಮಾಗಳು ಮೊದಲು ಚಿತ್ರಮಂದಿರ (ಥಿಯೇಟರ್)ಗಳಲ್ಲಿ ಬಿಡುಗಡೆಯಾಗುತ್ತವೆ. ಅದಾದ ಕೆಲ ದಿನಗಳ ಬಳಿಕ ಆ ಸಿನಿಮಾಗಳು ನಿಧಾನವಾಗಿ ಟಿ.ವಿ ಗೆ, ಆ ನಂತರ ಅಮೇಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಜೀ5 ಹೀಗೆ ಬೇರೆ ಬೇರೆ ಓಟಿಟಿಗಳ ಮೂಲಕ ವೀಕ್ಷಕರ ಮುಂದೆ ಬರುವುದು ವಾಡಿಕೆ. ಆದರೆ ಅಪರೂಪಕ್ಕೆ ಕೆಲವೊಂದು ಸಿನಿಮಾಗಳು ಚಿತ್ರಮಂದಿರ (ಥಿಯೇಟರ್)ಗಳಲ್ಲಿ ಬಿಡುಗಡೆಯಾಗುವ ಬದಲು ನೇರವಾಗಿ ಓಟಿಟಿಗಳ ಮೂಲಕ ವೀಕ್ಷಕರ ಮುಂದೆ ಬರುತ್ತವೆ.
ಮೇ ತಿಂಗಳ ಎರಡನೇ ಶುಕ್ರವಾರ (ಮೇ. 10, 2024) ರಂದು ಕನ್ನಡದಲ್ಲಿ ‘ಗ್ರೇ ಗೇಮ್ಸ್’, ‘ಅಲೈಕ್ಯ’, ‘4 n 6’, ‘ರಾಮನ ಅವತಾರ’ ಮತ್ತು ‘ಎಂಥಾ ಕಥೆ ಮಾರಾಯ’ ಎಂಬ ಐದು ಸಿನಿಮಾಗಳು ಬಿಡುಗಡೆಯಾಗಿವೆ. ಇವುಗಳ ಪೈಕಿ ‘ಗ್ರೇ ಗೇಮ್ಸ್’, ‘ಅಲೈಕ್ಯ’, ‘4 n 6’ ಮತ್ತು ‘ರಾಮನ ಅವತಾರ’ ಸಿನಿಮಾಗಳು ಚಿತ್ರಮಂದಿರ (ಥಿಯೇಟರ್)ಗಳಲ್ಲಿ ಬಿಡುಗಡೆಯಾದರೆ, ಇನ್ನುಳಿದ ‘ಎಂಥಾ ಕಥೆ ಮಾರಾಯ’ ಸಿನಿಮಾ ಚಿತ್ರಮಂದಿರ (ಥಿಯೇಟರ್)ಗಳಲ್ಲಿ ಬಿಡುಗಡೆಯಾಗುವ ಬದಲು ನೇರವಾಗಿ ಓಟಿಟಿಗಳ ಮೂಲಕ ವೀಕ್ಷಕರ ಮುಂದೆ ಬಂದಿದೆ.
ಓಟಿಟಿಯಲ್ಲಿ ‘ಎಂಥಾ ಕಥೆ ಮಾರಾಯ’ ಸಿನಿಮಾ ಸ್ಟ್ರೀಮಿಂಗ್
ಹೌದು, ‘ಎಂಥಾ ಕಥೆ ಮಾರಾಯ’ ಸಿನಿಮಾ ಚಿತ್ರಮಂದಿರ (ಥಿಯೇಟರ್)ಗಳಲ್ಲಿ ಬಿಡುಗಡೆಯಾಗುವ ಬದಲು ನೇರವಾಗಿ ಓಟಿಟಿಗಳ ಮೂಲಕ ವೀಕ್ಷಕರ ಮುಂದೆ ಬಂದಿದೆ. ಪ್ರಸ್ತುತ ಪ್ರಾಕೃತಿಕ ವಿದ್ಯಮಾನಗಳ ಸುತ್ತ ಹೆಣೆದಿರುವ ಯುವ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ಎಂಥಾ ಕಥೆ ಮಾರಾಯ’ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗಿದೆ. ಏರ್‌ಟೆಲ್ ಎಕ್ಸ್‌ಟ್ರೀಮ್, ಹಂಗಾಮ ಪ್ಲೇ, ಓಟಿಟಿ ಪ್ಲೇ ಮುಂತಾದ ಓಟಿಟಿಗಳಲ್ಲಿ ‘ಎಂಥಾ ಕಥೆ ಮಾರಾಯ’ ಸಿನಿಮಾ ಸ್ಟ್ರೀಮ್ ಆಗುತ್ತಿದೆ.
ಮಲೆನಾಡಿನ ಕಥೆಗೆ ಸಿನಿಮಾ ರೂಪ
ನಿರ್ದೇಶಕರಾದ ರಕ್ಷಿತ್ ತೀರ್ಥಹಳ್ಳಿಯವರೇ ಬರೆದ ‘ಕಾಡಿನ ನೆಂಟರು‘ ಕಥಾಸಂಕಲನ ಆಧಾರಿತ ಸಿನಿಮಾ ಇದಾಗಿದ್ದು, ಸುಧೀರ್ ಎಸ್. ಜೆ, ವೇದಾಂತ್ ಸುಬ್ರಮಣ್ಯ, ಶ್ರೀಪ್ರಿಯ, ಅಶ್ವಿನ್ ಹಾಸನ್, ಕರಿಸುಬ್ಬು, ಕೇಶವ್ ಗುತ್ತಳಿಕೆ, ಸಮೀರ್ ನಗರದ್ ಮುಂತಾದವರು ‘ಎಂಥಾ ಕಥೆ ಮಾರಾಯ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಎಂಥಾ ಕಥೆ ಮಾರಾಯ’ ಸಿನಿಮಾಕ್ಕೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಹೇಮಂತ್ ಜೋಯಿಸ್ ಸಂಗೀತ ಸಂಯೋಜಿಸಿದ್ದು, ʼಸಂಚಲನ ಮೂವೀಸ್ʼ ಬ್ಯಾನರ್ ಅಡಿಯಲ್ಲಿ ರಾಮಕೃಷ್ಣ ನಿಗಡೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ʼಚೆನ್ನೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವʼದಲ್ಲಿ ಪ್ರದರ್ಶನವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಚಿತ್ರ ಬೆಂಗಳೂರಿನ ಪ್ರಸಕ್ತ ನೀರಿನ ಸಮಸ್ಯೆ ಮತ್ತು ಜಾಗತಿಕ ತಾಪಮಾನದ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಿದೆ. ಶರಾವತಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ತರಿಸುವ ವಿಚಾರದ ಸುತ್ತಲೂ ಚಿತ್ರದ ಕಥೆ ಸಾಗುತ್ತದೆ.
ಶರಾವತಿ ನದಿಯ ಸಂತ್ರಸ್ತರ ಬದುಕಲ್ಲಿ ಲಿಂಗನಮಕ್ಕಿ ಡ್ಯಾಂ ನಿರ್ಮಾಣದಿಂದ ಹಿಡಿದು ಇಲ್ಲಿಯವರೆಗಿನ ಆಗುಹೋಗುಗಳು ಚಿತ್ರದಲ್ಲಿ ಅಡಕವಾಗಿವೆ. ಒಂದು ನದಿ, ಒಂದು ಕುಟುಂಬ ಹಾಗೂ ಹಲವು ಯೋಜನೆಗಳ ಸಾಲು ಆ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಜೊತೆಗೆ ಪಶ್ಚಿಮ ಘಟ್ಟಗಳ ಅವಶ್ಯಕತೆ ಹಾಗೂ ನದಿಮೂಲಗಳನ್ನ ಉಳಿಸಿಕೊಳ್ಳುವುದರ ತುರ್ತು ಪ್ರಾಮುಖ್ಯತೆಗೆ ‘ಎಂಥಾ ಕಥೆ ಮಾರಾಯ’ ಸಿನಿಮಾ ಕನ್ನಡಿ ಹಿಡಿದಂತಿದೆ.
ಒಟ್ಟಾರೆ ಪ್ರತಿವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೂ, ಪ್ರೇಕ್ಷಕರು ನಿರೀಕ್ಷಿತ ಪ್ರಮಾಣದಲ್ಲಿ ಥಿಯೇಟರ್ ಕಡೆಗೆ ಮುಖ ಮಾಡದಿರುವುದರಿಂದ ನೇರವಾಗಿ ವೀಕ್ಷಕರನ್ನು ತಲುಪುವ ಉದ್ದೇಶದಿಂದ ‘ಎಂಥಾ ಕಥೆ ಮಾರಾಯ’ ಸಿನಿಮಾ ಈ ಮಾರ್ಗದ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ ಎನ್ನಲಾಗುತ್ತಿದೆ.