ಜೂನ್ 14ಕ್ಕೆ ಡಾಲಿ ಧನಂಜಯ್ ʼಕೋಟಿʼ ದರ್ಶನ

ಡಾಲಿ ಧನಂಜಯ್ ಅಭಿನಯದ ʼಕೋಟಿʼ ಸಿನಿಮಾದ ಬಿಡುಗಡೆಗೆ ಮುಹೂರ್ತ ಫಿಕ್ಸ್
ನಟ ಡಾಲಿ ಧನಂಜಯ್ ನಾಯಕ ನಟನಾಗಿ ಅಭಿನಯದ ʼಕೋಟಿʼ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ನಡೆಯುತ್ತಿದೆ. ಇದರ ನಡುವೆಯೇ ಚಿತ್ರತಂಡ ʼಕೋಟಿʼ ಸಿನಿಮಾದ ಬಿಡುಗಡೆಗೆ ಮುಹೂರ್ತವನ್ನು ನಿಶ್ಚಯಿಸಿದೆ. ಹೌದು, ಇದೇ 2024ರ ಜೂನ್ 14ರಂದು ಡಾಲಿ ಧನಂಜಯ್ ನಾಯಕ ನಟನಾಗಿ ಅಭಿನಯಿಸುತ್ತಿರುವ ʼಕೋಟಿʼ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಜೂನ್ 14ಕ್ಕೆ ʼಕೋಟಿʼ ಸಿನಿಮಾ ರಿಲೀಸ್
ʼಕೋಟಿʼ ಸಿನಿಮಾದಲ್ಲಿ ನಾಯಕ ನಟ ಡಾಲಿ ಧನಂಜಯ ಅವರಿಗೆ ಕೊಡಗಿನ ಬೆಡಗಿ ಮೋಕ್ಷಾ ಕುಶಾಲ್ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್ ಇಂದಿರಾ, ತಾರಾ, ಸರ್ದಾರ್ ಸತ್ಯ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ʼಕೋಟಿʼ ಸಿನಿಮಾದ ಐದು ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ʼಚಾರ್ಲಿ 777ʼ ಖ್ಯಾತಿಯ ನೊಬಿನ್ ಪೌಲ್ ʼಕೋಟಿʼ ಸಿನಿಮಾಕ್ಕೆ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ʼಕಾಂತಾರʼ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿ ʼಕೋಟಿʼಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಈ ಸಿನಿಮಾಕ್ಕೆ ಕ್ಯಾಮರ ಹಿಡಿದಿದ್ದಾರೆ. ʼಕೋಟಿʼ ಸಿನೆಮಾವನ್ನು ʼಜಿಯೋ ಸ್ಟುಡಿಯೋಸ್ʼ ನಿರ್ಮಾಣ ಮಾಡಿದ್ದು, ʼಕಲರ್ಸ್ ಕನ್ನಡʼವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ (ಪರಮೇಶ್ ಗುಂಡ್ಕಲ್) ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಈಗಾಗಲೇ ತನ್ನ ಟೈಟಲ್, ಫಸ್ಟ್‌ಲುಕ್ ಪೋಸ್ಟರ್ ಮತ್ತು ಹಾಡುಗಳ ಮೂಲಕ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುತ್ತಿರುವ ʼಕೋಟಿʼ ಸಿನಿಮಾದ ಅಬ್ಬರ ತೆರೆಮೇಲೆ ಹೇಗಿರಲಿದೆ ಎಂಬುದು ಇದೇ 2024ರ ಜೂನ್ ಅಂತ್ಯದೊಳಗೆ ಗೊತ್ತಾಗಲಿದೆ.