‘ಟರ್ಬೋ’ ಟ್ರೇಲರ್; ಮಲಯಾಳಂ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಮಾಸ್ ಎಂಟ್ರಿ

ಮಾಲಿವುಡ್‌ನಲ್ಲಿ ರಾಜ್ ಬಿ. ಶೆಟ್ಟಿ ಹೊಸ ಇನ್ನಿಂಗ್ಸ್
ಮಮ್ಮೂಟ್ಟಿ ‘ಟರ್ಬೋ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಖಡಕ್ ವಿಲನ್
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಬಳಿಕ ನಟ ಕಂ ನಿರ್ದೇಶಕ ರಾಜ್ ಬಿ. ಶೆಟ್ಟಿ ಮಲೆಯಾಳಂ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಸ್ಯಾಂಡಲ್‌ವುಡ್ ಅಂಗಳದಲ್ಲಿ ಕೆಲ ತಿಂಗಳಿನಿಂದ ಹರಿದಾಡುತ್ತಿದ್ದರೂ, ಆ ಸಿನಿಮಾ ಯಾವುದು? ಅದರ ಹೆಸರೇನು? ಆ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಅವರ ಪಾತ್ರವೇನು? ಹೀಗೆ ಹತ್ತಾರು ಪ್ರಶ್ನೆಗಳು ಹಾರಿದಾಡುತ್ತಿದ್ದರೂ, ಅವುಗಳಾವುದಾಕ್ಕೂ ಉತ್ತರ ಸಿಕ್ಕಿರಲಿಲ್ಲ. ಈಗ ಆ ಎಲ್ಲ ಬಹುತೇಕ ಪ್ರಶ್ನೆಗಳಿಗೆ ‘ಟರ್ಬೋ’ ಎಂಬ ಒಂದೇ ಒಂದು ಟ್ರೇಲರ್‌ನಲ್ಲಿ ಉತ್ತರ ಸಿಕ್ಕಿದೆ!
ಅದ್ಧೂರಿ ಟ್ರೇಲರ್‌ನಲ್ಲಿ ಶೆಟ್ಟರ ಎಂಟ್ರಿ
ಹೌದು, ರಾಜ್ ಬಿ. ಶೆಟ್ಟಿ ಅಭಿನಯಿಸುತ್ತಿರುವ ಮಲೆಯಾಳಂ ಸಿನಿಮಾ ‘ಟರ್ಬೋ’ ದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಮಲೆಯಾಳಂನ ಖ್ಯಾತ ನಟ ಮಮ್ಮೂಟ್ಟಿ ನಾಯಕ ನಟನಾಗಿರುವ ‘ಟರ್ಬೋ’ ಸಿನಿಮಾದಲ್ಲಿ ನಟ ರಾಜ್ ಬಿ. ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಡುಗಡೆಯಾಗಿರುವ ‘ಟರ್ಬೋ’ ಸಿನಿಮಾದ ಟ್ರೇಲರ್‌ನಲ್ಲಿ ರಾಜ್ ಬಿ. ಶೆಟ್ಟಿ ಸಖತ್ ಸ್ಟೈಲಿಶ್ ಆಗಿ ಮಾಸ್ ಗೆಟಪ್‌ನಲ್ಲಿ ಮಿಂಚಿದ್ದಾರೆ. ಈ ಟ್ರೇಲರ್‌ನಲ್ಲಿ ರಾಜ್ ಶೆಟ್ಟಿ ಅವರ ಹಲವು ಶಾಟ್‍ಗಳಿದ್ದು, ಮಮ್ಮೂಟ್ಟಿ ಎದುರು ಖಡಕ್ ವಿಲನ್ ಆಗಿ ರಾಜ್ ನಟಿಸಿದ್ದಾರೆ. ಸದ್ಯ ಈ ಟ್ರೇಲರ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ರಾಜ್ ಬಿ. ಶೆಟ್ಟಿ ಹೊಸ ಲುಕ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದುಬೈನಲ್ಲಿ ಬಿಡುಗಡೆಯಾದ ‘ಟರ್ಬೋ’ ಟ್ರೇಲರ್
ಮೇ. 12 ರ ಭಾನುವಾರ ರಾತ್ರಿ ದುಬೈನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ‘ಟರ್ಬೋ’ ಸಿನಿಮಾದ ಟ್ರೇಲರ್ ಹೊರಬಂದಿದೆ. ‘ಟರ್ಬೋ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟರಾದ ಮಮ್ಮೂಟ್ಟಿ, ರಾಜ್ ಬಿ. ಶೆಟ್ಟಿ, ನಿರ್ದೇಶಕ ವೈಶಾಕ್ ಸೇರಿದಂತೆ ಸಿನಿಮಾದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದರು.
ಮೇ. 24ಕ್ಕೆ ‘ಟರ್ಬೋ’ ಬಿಡುಗಡೆ
ಸದ್ಯ ಟ್ರೇಲರ್ ಮೂಲಕ ಸೌಥ್ ಸಿನಿ ದುನಿಯಾದಲ್ಲಿ ಒಂದಷ್ಟು ಸೌಂಡ್ ಮಾಡುತ್ತಿರುವ ‘ಟರ್ಬೋ’ ಸಿನಿಮಾ ಇದೇ ಮೇ 24ರಂದು ಬಿಡುಗಡೆಯಾಗುತ್ತಿದೆ. ‘ಟರ್ಬೋ’ ಚಿತ್ರದಲ್ಲಿ ಮಮ್ಮೂಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅಲ್ಲದೆ, ಅಂಜನ ಜಯಪ್ರಕಾಶ್, ತೆಲುಗಿನ ಸುನೀಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಮುಂತಾದವರು ನಟಿಸಿದ್ದಾರೆ. ಕ್ರಿಸ್ಟೋ ಕ್ಸೇವಿಯರ್ ಸಂಗೀತ ಮತ್ತು ವಿಷ್ಣು ಶರ್ಮ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಲಯಾಳಂ ನಲ್ಲಿ ಈ ಹಿಂದೆ ‘ಪುಲಿಮುರುಗನ್’, ‘ಮಧುರೈ ರಾಜ’ದಂತಹ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ವೈಶಾಕ್, ಈ ಸಿನಿಮಾವನ್ನು ನಿರ್ದೇಶಿಸಿದ್ದು, ಮಿಥುನ್ ಮ್ಯಾನುವಲ್ ಥಾಮಸ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮಮ್ಮೂಟ್ಟಿ ಕಂಪನಿ ಸಂಸ್ಥೆಯಡಿ ಈ ಸಿನಿಮಾವನ್ನು ಸ್ವತಃ ಮಮ್ಮೂಟ್ಟಿ ಅವರೇ ನಿರ್ಮಿಸಿದ್ದಾರೆ.
ಇನ್ನು ‘ಟರ್ಬೋ’ ಸಿನಿಮಾವನ್ನು ಕರ್ನಾಟಕದಲ್ಲಿ ಸ್ವತಃ ರಾಜ್ ಬಿ. ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ʼಲೈಟರ್ ಬುದ್ಧ ಫಿಲಂಸ್ʼ ಹಂಚಿಕೆ ಮಾಡುತ್ತಿದೆ. ಒಟ್ಟಾರೆ ಟ್ರೇಲರ್ ಮೂಲಕ ಎಂಟ್ರಿ ಕೊಟ್ಟಿರುವ ರಾಜ್ ಬಿ. ಶೆಟ್ಟಿ ಹೊಸ ಮಲೆಯಾಳಂ ಸಿನಿಮಾ ಹೇಗಿರಲಿದೆ? ಎಂಬ ಕುತೂಹಲಕ್ಕೆ ಮೇ ಅಂತ್ಯದೊಳಗೆ ಉತ್ತರ ಸಿಗಲಿದೆ.