‘ಮಾತು ಸೋತು’ ಹೃದಯ ಮೀಟುವ ‘ಕೋಟಿ’ ಗೀತೆ…

ಡಾಲಿ ಧನಂಜಯ್ ಅಭಿನಯದ ‘ಕೋಟಿ’ ಚಿತ್ರದ ಗೀತೆ ಬಿಡುಗಡೆ
‘ಮಾತು ಸೋತು’ ಪ್ರೇಮಗೀತೆಗೆ ಅರ್ಮಾನ್ ಮಲ್ಲಿಕ್ ಧ್ವನಿ
ಡಾಲಿ ಧನಂಜಯ್ ಅಭಿನಯದ ‘ಕೋಟಿ’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಕೋಟಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, 2024ರ ಮೇ. 13 ರ ಸೋಮವಾರದಂದು ‘ಕೋಟಿ’ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.
‘ಮಾತು ಸೋತು’ ಎಂಬ ಸಾಲಿನಿಂದ ಶುರುವಾಗುವ ಈ ಹಾಡಿಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಈ ಗೀತೆಗೆ ಧ್ವನಿಯಾಗಿದ್ದಾರೆ. ‘ಕೋಟಿ’ ಸಿನಿಮಾದ ಹಾಡುಗಳ ಹಕ್ಕನ್ನು ‘ಸರೆಗಮ ಮ್ಯೂಸಿಕ್’ ಸಂಸ್ಥೆ ಖರೀದಿಸಿದ್ದು, ಈ ಹಾಡಿನ ಲಿರಿಕಲ್ ವಿಡಿಯೋವನ್ನು ‘ಸರೆಗಮ ಕನ್ನಡ’ ಯೂ-ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಇನ್ನು ‘ಕೋಟಿ’ ಸಿನಿಮಾದ ಬಿಡುಗಡೆಯಾಗಿರುವ ‘ಮಾತು ಸೋತು’ ಹಾಡಿನ ಬಗ್ಗೆ ಮಾತನಾಡಿರುವ ಹಾಡಿನ ಸಂಗೀತ ಸಂಯೋಜಕರಾದ ವಾಸುಕಿ ವೈಭವ್, “ಇದು ನನ್ನ ಮತ್ತು ಅರ್ಮಾನ್ ಮಲಿಕ್ ಕಾಂಬಿನೇಷನ್ನಿನ ಮೊದಲ ಹಾಡು. ಸಾಹಿತ್ಯ ಯೋಗರಾಜ್ ಭಟ್ ಅವರದ್ದು. ಅವರ ಜತೆ ಕೆಲಸ ಮಾಡುವುದು ಯಾವಾಗಲೂ ಖುಷಿ ಮತ್ತು ಕಲಿಕೆಯ ವಿಚಾರ. ಜನರಿಗೆ ಖಂಡಿತ ಈ ಹಾಡು ಇಷ್ಟವಾಗತ್ತೆ ಅನ್ನೊ ನಂಬಿಕೆ ಇದೆ” ಎಂದು ಹೇಳಿದ್ದಾರೆ.
ಕನ್ನಡದ ಕಿವಿ ಮತ್ತು ಮನಸುಗಳಿಗೆ ಇಷ್ಟವಾಗುವ ಹಾಡಿದು; ಪರಮ್
“ವಾಸುಕಿ ಹೊಸ ತಲೆಮಾರಿನ ಪ್ರತಿಭಾವಂತ ಸಂಗೀತ ನಿರ್ದೇಶಕ. ಯೋಗರಾಜ್ ಭಟ್ ಅವರ ಸಾಹಿತ್ಯದ ದೊಡ್ಡ ಅಭಿಮಾನಿ ನಾನು. ಈ ಇಬ್ಬರ ಕಾಂಬಿನೇಷನ್ನಿನ ಈ ಹಾಡನ್ನು ಅರ್ಮಾನ್ ಮಲಿಕ್ ತುಂಬಾ ಚೆನ್ನಾಗಿ ಹಾಡಿದ್ದಾರೆ. ಈ ಹಾಡು ಕನ್ನಡದ ಕಿವಿ ಮತ್ತು ಮನಸುಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂಬುದು ‘ಕೋಟಿ’ ಸಿನಿಮಾದ ನಿರ್ದೇಶಕ ಪರಮ್ ಅವರ ಅಭಿಪ್ರಾಯ.
ಜೂ. 14ಕ್ಕೆ ಥಿಯೇಟರಿನಲ್ಲಿ ‘ಕೋಟಿʼ ದರ್ಶನ
‘ಕೋಟಿʼ ಸಿನಿಮಾದಲ್ಲಿ ನಾಯಕ ನಟ ಡಾಲಿ ಧನಂಜಯ ಅವರಿಗೆ ಮೋಕ್ಷಾ ಕುಶಾಲ್ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್ ಇಂದಿರಾ, ತಾರಾ, ಸರ್ದಾರ್ ಸತ್ಯ ಮುಂತಾದವರು ‘ಕೋಟಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಕೋಟಿʼ ಸಿನಿಮಾದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ‘ಚಾರ್ಲಿ 777’ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ‘ಕೋಟಿʼ ಸಿನಿಮಾವನ್ನು ‘ಜಿಯೋ ಸ್ಟುಡಿಯೋಸ್’ ನಿರ್ಮಾಣ ಮಾಡಿದ್ದು, ಇದೇ 2024ರ ಜೂನ್ 14ರಂದು ‘ಕೋಟಿʼ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ತೆರೆಗೆ ಬರಲಿದೆ.