Straight Talk

ದೂದ್ ಪೇಡಾ ಕೈಗೆ ಕೋಳಾ? ʼದಿ ಜಡ್ಜ್‌ಮೆಂಟ್‌ʼನತ್ತ ದಿಗಂತ್ ಚಿತ್ತ!

ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಲವ್‌, ರೊಮ್ಯಾನ್ಸ್‌ ಮತ್ತು ಕಾಮಿಡಿ ಶೈಲಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟ ದಿಗಂತ್‌, ಈ ಬಾರಿ ಲೀಗಲ್‌-ಥ್ರಿಲ್ಲರ್‌ ಶೈಲಿಯ ʼದ ಜಡ್ಜ್‌ಮೆಂಟ್‌ʼ ಸಿನಿಮಾದಲ್ಲಿ ಹೊಸಥರದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ʼದ ಜಡ್ಜ್‌ಮೆಂಟ್‌ʼ ಸಿನಿಮಾ ಪೋಸ್ಟರ್‌, ಫಸ್ಟ್‌ಲುಕ್‌ ಮತ್ತು ಟೀಸರ್‌ಗಳಲ್ಲಿ ನಟ ದಿಗಂತ್‌ ಪಾತ್ರ ಗಮನ ಸೆಳೆಯುತ್ತಿದ್ದು, ತಮ್ಮ ಹೊಸ ಸಿನಿಮಾ ಮತ್ತು ಹೊಸ ಪಾತ್ರದ ಬಗ್ಗೆ ದಿಗಂತ್‌ ಒಂದಷ್ಟು ಮಾತನಾಡಿದ್ದಾರೆ.

————————–

೧) ʼದ ಜಡ್ಜ್‌ಮೆಂಟ್‌ʼ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?

ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ʼದ ಜಡ್ಜ್‌ಮೆಂಟ್‌ʼ ಸಿನಿಮಾದಲ್ಲಿದೆ. ಇಂದಿನ ಜನರೇಶನ್‌ನ ಬೆಂಗಳೂರಿನಂತಹ ಸಿಟಿಯಲ್ಲಿರುವ ಯುವಕರನ್ನು ಪ್ರತಿನಿಧಿಸುವಂತೆ ನನ್ನ ಪಾತ್ರವಿದೆ. ತನ್ನ ಇಷ್ಟದಂತೆ ಜೀವನ ನಡೆಸಲು ಹೊರಟ ಹುಡುಗನೊಬ್ಬನ ಜೀವನದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು, ಏನೆಲ್ಲ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂಬುದರ ಸುತ್ತ ನನ್ನ ಪಾತ್ರವಿದೆ.

೨) ನಿಮ್ಮ ಪ್ರಕಾರ ʼದ ಜಡ್ಜ್‌ಮೆಂಟ್‌ʼ ಅಂದ್ರೇನು?

ನನ್ನ ಪ್ರಕಾರ, ʼದ ಜಡ್ಜ್‌ಮೆಂಟ್‌ʼ ಒಂದು ಕೋರ್ಟ್‌ ರೂಂ ಡ್ರಾಮಾ ಸಿನಿಮಾ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ). ಇಂದಿನ ಕಾನೂನು, ನ್ಯಾಯ ವ್ಯವಸ್ಥೆ ಎಲ್ಲದರ ಚಿತ್ರಣ ಈ ಸಿನಿಮಾದಲ್ಲಿದೆ. ಇದೊಂದು ಲೀಗಲ್‌-ಥ್ರಿಲ್ಲರ್‌ ಶೈಲಿಯ ಸಿನಿಮಾವಾಗಿರುವುದರಿಂದ, ಇದಕ್ಕಿಂತ ಹೆಚ್ಚಾಗಿ ಸಿನಿಮಾದ ಬಗ್ಗೆ ಏನೂ ಕುತೂಹಲ ಬಿಟ್ಟುಕೊಡಲಾರೆ.

೩) ʼದ ಜಡ್ಜ್‌ಮೆಂಟ್‌ʼ ಸಿನಿಮಾ ಒಪ್ಪಿಕೊಳ್ಳಲು ಕಾರಣ?  

ಮೊದಲೇ ಹೇಳಿದಂತೆ, ನಾನು ಇಲ್ಲಿಯವರೆ ಮಾಡಿದ ಸಿನಿಮಾಗಳಿಗಿಂತ ವಿಭಿನ್ನ ಕಥೆ, ಪಾತ್ರ ಎರಡೂ ಈ ಸಿನಿಮಾದಲ್ಲಿದೆ. ರವಿಚಂದ್ರನ್‌ ಅವರಂಥ ದೊಡ್ಡ ನಟರ ಜೊತೆ ಅಭಿನಯಿಸುವ ಅವಕಾಶ, ತುಂಬ ದೊಡ್ಡ ಸ್ಟಾರ್‌ ಕಾಸ್ಟಿಂಗ್‌, ತುಂಬ ವೃತ್ತಿಪರವಾಗಿರುವ ನಿರ್ದೇಶಕ ಗುರುರಾಜ್‌ ಕುಲಕರ್ಣಿ ಮತ್ತು ಸಿನಿಮಾದ ಬಗ್ಗೆ ತುಂಬ ಪ್ಯಾಶನೇಟ್‌ ಆಗಿರುವ ತಂಡ. ಇವೆಲ್ಲವೂ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣವಾಯಿತು.

೪) ರವಿಚಂದ್ರನ್‌ ಜೊತೆಗಿನ ಚಿತ್ರೀಕರಣದ ಅನುಭವ ಹೇಗಿತ್ತು?

ನಾನು ರವಿ ಸರ್‌ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಮೊದಲ ಬಾರಿಗೆ ʼದ ಜಡ್ಜ್‌ಮೆಂಟ್‌ʼ ಸಿನಿಮಾದಲ್ಲಿ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗಿದೆ.  ರವಿ ಸರ್‌ ಜೊತೆಗೆ ಶೂಟಿಂಗ್‌ ಮಾಡುವಾಗ, ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಅವರಿಂದ ಕಲಿತುಕೊಳ್ಳುವುದು, ಮಾತಿಗೆ ಕುಳಿತುಕೊಂಡರೆ ಅವರಿಂದ ತಿಳಿದುಕೊಳ್ಳುವುದು ಸಾಕಷ್ಟು ವಿಷಯಗಳು ಇರುತ್ತದೆ.

೫) ಶೂಟಿಂಗ್‌ನಲ್ಲಿ ರವಿಚಂದ್ರನ್‌ ಅವರಿಂದ ಕಲಿತುಕೊಂಡಿದ್ದೇನಾದರೂ ಇದೆಯಾ?

ನಾವೆಲ್ಲ ಸಿನಿಮಾವನ್ನು ಆಡಿಯನ್ಸ್‌ ಆಗಿ ಅಥವಾ ಕಲಾವಿದರಾಗಿ ನೋಡಿದರೆ, ರವಿ ಸರ್‌ ಸಿನಿಮಾವನ್ನು ಬೇರೆಯದ್ದೇ ದೃಷ್ಟಿಕೋನದಲ್ಲಿ ನೋಡುತ್ತಾರೆ. ಅವರು ಆಡಿಯನ್‌, ಆರ್ಟಿಸ್ಟ್‌, ಟೆಕ್ನೀಶಿಯನ್‌, ಮೇಕರ್‌ ಎಲ್ಲವೂ ಆಗಿರುವುದರಿಂದ, ಸಿನಿಮಾವನ್ನು ಅವರು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಸಿನಿಮಾ ವಿಷಯದಲ್ಲಿ ಅವರ ಜ್ಞಾನ ತುಂಬ ಅಪಾರ. ಸಿನಿಮಾ ಮೇಕಿಂಗ್‌ ಬಗ್ಗೆ ಅವರು ಹೇಳುವ ವಿಷಯಗಳು ಬೇರೆಲ್ಲೂ ಕಲಿತುಕೊಳ್ಳಲು ಸಿಗದಂತವು.

೬) ಸಿನಿಮಾದಲ್ಲಿ ನಿಮ್ಮ ಪಾತ್ರಕ್ಕೆ ತಯಾರಿ ಹೇಗಿತ್ತು?

ಸಾಮಾನ್ಯವಾಗಿ ಪ್ರತಿ ಸಿನಿಮಾದ ಪಾತ್ರಗಳಿಗೂ ಅದರದ್ದೇ ಆದ ಒಂದಷ್ಟು ತಯಾರಿ ಇದ್ದೇ ಇರುತ್ತದೆ. ಆದರೆ ನಿಜ ಹೇಳಬೇಕೆಂದರೆ, ಈ ಸಿನಿಮಾಕ್ಕೆ ಅಷ್ಟೊಂದು ತಯಾರಿ ಮಾಡಿಕೊಂಡಿರಲಿಲ್ಲ. ಅದಕ್ಕೆ ಕಾರಣ ನಿರ್ದೇಶಕ ಗುರುರಾಜ್‌. ಈ ಸಿನಿಮಾದ ಪ್ರತಿ ಪಾತ್ರಗಳು, ಸನ್ನಿವೇಶಗಳು ಹೇಗೆ ಬರಬೇಕು ಎಂಬುದರ ಬಗ್ಗೆ ಅವರಿಗೆ ಸ್ಪಷ್ಟತೆಯಿತ್ತು. ಪ್ರತಿಯೊಂದನ್ನೂ ಕಲಾವಿದರಿಗೆ ಅರ್ಥೈಸಿ ಅವರಿಂದ ಅಭಿನಯ ತೆಗೆಸುತ್ತಿದ್ದರು. ಅದನ್ನು ಬಿಟ್ಟರೆ ಸಿನಿಮಾದಲ್ಲಿ ಬರುವ ಡ್ಯಾನ್ಸ್‌ ನಂಬರ್‌ಗೆ ಒಂದಷ್ಟು ತಯಾರಿ ಮಾಡಿಕೊಳ್ಳಬೇಕಾಯಿತು.

೭) ಸಿನಿಮಾದಲ್ಲಿ ನಿಮ್ಮ ಮತ್ತು ಧನ್ಯಾ ಕೆಮಿಸ್ಟ್ರಿ ಹೇಗಿದೆ?

ʼದ ಜಡ್ಜ್‌ಮೆಂಟ್‌ʼ ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಧನ್ಯಾ ರಾಮಕುಮಾರ್‌ ಜೋಡಿಯಾಗಿ ಅಭಿನಯಿಸಿದ್ದೇವೆ. ನಮ್ಮಿಬ್ಬರದ್ದೂ, ಇಂದಿನ ಜನರೇಶನ್‌ ಯುವ ಜೋಡಿಯನ್ನು ಪ್ರತಿನಿಧಿಸುವಂಥ ಪಾತ್ರ. ಇಬ್ಬರ ಕೆಮಿಸ್ಟ್ರಿ ತುಂಣಬ ಚೆನ್ನಾಗಿದೆ. ಕಲಾವಿದೆಯಾಗಿ ಬೆಳೆಯಬೇಕೆಂಬ ಧನ್ಯಾ ಅವರ ಉದ್ದೇಶ, ಅವರ ಉತ್ಸಾಹ ಎರಡೂ ಮೆಚ್ಚುವಂಥದ್ದು. ʼದ ಜಡ್ಜ್‌ಮೆಂಟ್‌ʼ ಸಿನಿಮಾದ ನಂತರ ʼಪೌಡರ್‌ʼ ಸಿನಿಮಾದಲ್ಲೂ ನಾವಿಬ್ಬರೂ ಒಟ್ಟಿಗೇ ಅಭಿನಯಿಸುತ್ತಿದ್ದೇವೆ.

೮) ನಿರ್ದೇಶಕರು ಮತ್ತು ಚಿತ್ರತಂಡದ ಬಗ್ಗೆ ಏನು ಹೇಳುವಿರಿ?

ʼದ ಜಡ್ಜ್‌ಮೆಂಟ್‌ʼ ಸಿನಿಮಾದ ನಿರ್ದೇಶಕ ಗುರುರಾಜ್‌ ಮೂಲತಃ ಸಾಫ್ಟ್‌ವೇರ್‌ ಹಿನ್ನೆಲೆಯಿಂದ ಸಿನಿಮಾಕ್ಕೆ ಬಂದವರು. ಸಾಕಷ್ಟು ವಿಷಯಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ. . ಬಿಗ್‌ ಕಾಸ್ಟಿಂಗ್‌, ಬಿಗ್‌ ಬಜೆಟ್‌ ಇಟ್ಟುಕೊಂಡು ಅಂದುಕೊಂಡಂತೆ, ಪ್ಲಾನ್‌ ಪ್ರಕಾರ ಇಡೀ ಸಿನಿಮಾವನ್ನು ನಿರ್ದೇಶಕರು ಮತ್ತು ಚಿತ್ರತಂಡ ಅಚ್ಚುಕಟ್ಟಾಗಿ ತೆರೆಮೇಲೆ ತರುತ್ತಿದೆ. ತುಂಬ ಪ್ಯಾಶನೇಟ್‌ ಆಗಿ ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ.

೯) ʼದ ಜಡ್ಜ್‌ಮೆಂಟ್‌ʼ ಮೇಲೆ ನಿಮ್ಮ ನಿರೀಕ್ಷೆ ಹೇಗಿದೆ?

ನನ್ನ ಪ್ರಕಾರ, ʼದ ಜಡ್ಜ್‌ಮೆಂಟ್‌ʼ ಮಾಮೂಲಿ ಎಂಟರ್‌ಟೈನ್ಮೆಂಟ್‌ ಸಿನಿಮಾಗಳ ಸಾಲಿಗೆ ಅಥವಾ ಯಾವುದೋ ಒಂದು ವರ್ಗಕ್ಕೆ ಸೇರುವ ಸಿನಿಮಾವಲ್ಲ. ಕನ್ನಡದ ಮಟ್ಟಿಗೆ ತುಂಬ ಅಪರೂಪವಾಗಿರುವ ಲೀಗಲ್‌-ಥ್ರಿಲ್ಲರ್‌ ಶೈಲಿಯಲ್ಲಿ ಸಿನಿಮಾ ಬಂದಿದೆ. ಇದರಲ್ಲೊಂದು ಒಳ್ಳೆಯ ವಿಷಯವಿದೆ. ಅದನ್ನು ಮನಮುಟ್ಟುವಂತೆ ನಿರ್ದೇಶಕರು ತೆರೆಮೇಲೆ ಹೇಳಿದ್ದಾರೆ. ಆಡಿಯನ್ಸ್‌ಗೆ ಖಂಡಿತವಾಗಿಯೂ ʼದ ಜಡ್ಜ್‌ಮೆಂಟ್‌ʼ ಒಂದು ಒಳ್ಳೆಯ ಅನುಭವ ಕೊಟ್ಟು, ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ.

೧೦) ಪ್ರಚಾರದ ವೇಳೆ ಪ್ರೇಕ್ಷಕರ ಕಡೆಯಿಂದ ಹೇಗೆ ರೆಸ್ಪಾನ್ಸ್‌ ಸಿಗುತ್ತಿದೆ?

ಈಗಾಗಲೇ ʼದ ಜಡ್ಜ್‌ಮೆಂಟ್‌ʼ ಸಿನಿಮಾದ ಟೈಟಲ್‌ ಪೋಸ್ಟರ್‌, ಕ್ಯಾರೆಕ್ಟರ್‌ ಫಸ್ಟ್‌ಲುಕ್‌, ಟೀಸರ್‌ ಮಾತ್ತು ಹಾಡು ಬಿಡುಗಡೆಯಾಗಿದೆ. ಎಲ್ಲದಕ್ಕೂ ಸೋಶಿಯಲ್‌ ಮೀಡಿಯಾಗಳಲ್ಲಿ ಆಡಿಯನ್ಸ್‌ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಬಹುತೇಕರು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!