ನಗೆ ಚಟಾಕಿ ಹತ್ತಿಸಿದ ‘ಪೌಡರ್’ ಟೀಸರ್

ದಿಗಂತ್ – ಧನ್ಯಾ ರಾಮಕುಮಾರ್ ಜೋಡಿಯ ಮತ್ತೊಂದು ಚಿತ್ರ
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ʼಕೆ.ಆರ್.ಜಿ ಸ್ಟುಡಿಯೋಸ್ʼ ಮತ್ತು ʼಟಿ.ವಿ.ಎಫ್ ಮೋಶನ್ ಪಿಕ್ಚರ್ಸ್ʼ ಸಂಸ್ಥೆಗಳು ಘೋಷಿಸಿದ ಚೊಚ್ಚಲ ಸಿನಿಮಾ ʼಪೌಡರ್ʼ ಇದೀಗ ಸದ್ದಿಲ್ಲದೆ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ ತನ್ನ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ʼಪೌಡರ್ʼ ಚಿತ್ರತಂಡ ಇದೀಗ ತಮ್ಮ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಮಾಡಿದೆ.
ಇನ್ನು ಬಿಡುಗಡೆಯಾಗಿರುವ ʼಪೌಡರ್ʼ ಸಿನಿಮಾದ ಟೀಸರ್ ನಲ್ಲಿ ಇಬ್ಬರು ಯುವಕರು ಒಂದು ನಿಗೂಢವಾದ ʼಪೌಡರ್ʼ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯ ಸಣ್ಣ ಝಲಕ್ ಅನ್ನು ತೋರಿಸಲಾಗಿದೆ. ʼಪೌಡರ್ʼ ಪ್ರಭಾವಕ್ಕೆ ಒಳಗಾದ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? ʼಪೌಡರ್ʼ ಹಿಂದಿನ ʼಪವರ್ʼ ಅವರಿಗೆ ತಿಳಿಯುವುದೇ? ಎಂಬ ಎಲ್ಲಾ ಪ್ರಶ್ನೆಗಳಿಗೆ ʼಪೌಡರ್ʼ ಸಿನಿಮಾ ಬಿಡುಗಡೆಯಾದ ಮೇಲಷ್ಟೇ ಉತ್ತರ ಸಿಗಲಿದೆ.
ಜುಲೈ 12ಕ್ಕೆ ಥಿಯೇಟರ್‌ನಲ್ಲಿ ʼಪೌಡರ್ʼ ಘಮಲು!
ಅಂದಹಾಗೆ, ಸದ್ಯ ಟೀಸರ್ ಬಿಡುಗಡೆಯ ಮೂಲಕ ಒಂದಷ್ಟು ಸಿನಿಮಾ ಮಂದಿಯ ಗಮನ ಸೆಳೆದಿರುವ ʼಪೌಡರ್ʼ ಸಿನಿಮಾವನ್ನು ಇದೇ ಜುಲೈ ತಿಂಗಳ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.
ʼಕೆ.ಆರ್.ಜಿ ಸ್ಟೂಡಿಯೋಸ್ʼ ಮತ್ತು ʼಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ʼ ಸಹ ನಿರ್ಮಾಣ
ʼಪೌಡರ್ʼ ಚಿತ್ರವನ್ನು ʼಕೆ.ಆರ್.ಜಿ ಸ್ಟೂಡಿಯೋಸ್ʼ ಮತ್ತು ʼಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ʼ ನ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಜನಾರ್ಧನ್ ಚಿಕ್ಕಣ್ಣ ʼಪೌಡರ್ʼ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ʼದಿ ಜಡ್ಜ್‌ಮೆಂಟ್ʼ ಸಿನಿಮಾದ ಬಳಿಕ ನಾಯಕ ನಟ ದಿಗಂತ್ ಮತ್ತು ನಟಿ ಧನ್ಯಾ ರಾಮಕುಮಾರ್ ಎರಡನೇ ಬಾರಿಗೆ ʼಪೌಡರ್ʼ ಸಿನಿಮಾದಲ್ಲಿ ಜೋಡಿಯಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಗೋಪಾಲಾಕೃಷ್ಣ ದೇಶಪಾಂಡೆ, ಶರ್ಮಿಳಾ ಮಾಂಡ್ರೆ, ನಾಗಭೂಷಣ್ ಹೀಗೆ ಬೃಹತ್ ಕಲಾವಿದರ ದಂಡೇ ʼಪೌಡರ್ʼ ಸಿನಿಮಾದಲ್ಲಿದೆ.