ವಿಜಯ್ ಸೇತುಪತಿ ನಟನೆಯ ‘ಏಸ್’ ಫಸ್ಟ್ ಲುಕ್ ರಿಲೀಸ್

ವಿಜಯ್ ಸೇತುಪತಿ ನಟನೆಯ ‘ಏಸ್’ ಫಸ್ಟ್ ಲುಕ್ ಹಾಗೂ ಟೈಟಲ್ ಟೀಸರ್ ಬಿಡುಗಡೆ
ತಮಿಳಿನ ಖ್ಯಾತ ನಟ, ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ನಟನೆಯ ಮುಂಬರುವ ಬಾಹುನಿರೀಕ್ಷಿತ ‘ಏಸ್’ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಟೀಸರ್ ಏಕಕಾಲಕ್ಕೆ ಬಿಡುಗಡೆಯಾಗಿದೆ. ಜೂಜು, ಬಂದೂಕು, ಸ್ಫೋಟ, ದರೋಡೆ ಮತ್ತು ಬೈಕ್ ಚೇಸಿಂಗ್ ಅಂಶಗಳನ್ನು ಒಳಗೊಂಡಿರುವ ಅನಿಮೇಟೆಡ್ ಸ್ವರೂಪದಲ್ಲಿ ʼಏಸ್ʼ ಟೀಸರ್ ಅನಾವರಣಗೊಳಿಸಲಾಗಿದೆ. ಇನ್ನು ಬಿಡುಗಡೆಯಾಗಿರುವ ‘ಏಸ್’ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಟೀಸರಿನಲ್ಲಿ ವಿಜಯ್ ಸೇತುಪತಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಏಸ್’ ಸಿನಿಮಾಕ್ಕೆ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿ
ವಿಜಯ್ ಸೇತುಪತಿ ‘ಏಸ್’ ಸಿನಿಮಾದಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರಾದಾಚೆ ಎಲ್ಲೋ’ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬಾನದಾರಿಯಲ್ಲಿ…’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ ರುಕ್ಮಿಣಿ ವಸಂತ್ ‘ಏಸ್’ ಸಿನಿಮಾದ ಮೂಲಕ ನಾಯಕ ನಟಿಯಾಗಿ ತಮಿಳು ಚಿತ್ರರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಇದೇ ವರ್ಷಾಂತ್ಯಕ್ಕೆ ತೆರೆಗೆ ಬರುವ ಯೋಜನೆ
‘ಏಸ್’ ಸಿನಿಮಾದಲ್ಲಿ ವಿಜಯ್ ಸೇತುಪತಿ, ರುಕ್ಮಿಣಿ ವಸಂತ್ ಅವರೊಂದಿಗೆ ತಮಿಳಿನ ಜನಪ್ರಿಯ ನಟ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಪಿ. ಎಸ್. ಅವಿನಾಶ್, ದಿವ್ಯಾ ಪಿಳ್ಳೈ, ಬಬ್ಲು, ರಾಜಕುಮಾರ್ ಹೀಗೆ ಅನೇಕ ಜನಪ್ರಿಯ ಕಲಾವಿದರ ದಂಡೇ ‘ಏಸ್’ ಸಿನಿಮಾದಲ್ಲಿದೆ. ‘ಏಸ್’ ಸಿನಿಮಾಕ್ಕೆ ಆರ್ಮುಗ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಕರಣ್ ಬಹದ್ದೂರ್ ರಾವತ್ ಛಾಯಾಗ್ರಹಣ, ಗೋವಿಂದರಾಜ್ ಸಂಕಲನವಿದ್ದು, ಜಸ್ಟಿನ್ ಪ್ರಭಾಕರನ್ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ, ಕ್ರೈಮ್-ಥ್ರಿಲ್ಲರ್ ಕಾಮಿಡಿ ಕಥಾಹಂದರ ಹೊಂದಿರುವ ʼಏಸ್ʼ ಸಿನಿಮಾವನ್ನು, ʼ7Cs ಎಂಟರ್‌ಟೈನ್‌ಮೆಂಟ್ʼ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿದೆ. ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರ ಈ ವರ್ಷದ ಕೊನೆಯೊಳಗೆ ತೆರೆಗೆ ಬರುವ ಯೋಜನೆಯಲ್ಲಿದೆ.