Telewalk

ʼನಿನಗಾಗಿʼ ಎನ್ನುತ್ತ ಮತ್ತೆ ಕಿರುತೆರೆಗೆ ಬಂದ ದಿವ್ಯಾ ಉರುಡುಗ

‘ಬಿಗ್‌ಬಾಸ್‌’ ಬಳಿಕ ಮತ್ತೆ ಕಿರುತೆರೆಯತ್ತ ದಿವ್ಯಾ ಉರುಡುಗ

‘ಕಲರ್ಸ್‌ ಕನ್ನಡ’ ವಾಹಿನಿಯ ‘ನಿನಗಾಗಿ’ ಧಾರಾವಾಹಿಯಲ್ಲಿ ದಿವ್ಯಾ-ಋತ್ವಿಕ್‌ ಜೋಡಿ

ಈಗಾಗಲೇ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್‌’ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ನಟಿ ದಿವ್ಯಾ ಉರುಡುಗ ಈಗ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

ಹೌದು, ಕನ್ನಡ ಕಿರುತೆರೆಯ ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಹೊಸದಾಗಿ ಶುರುವಾಗುತ್ತಿರುವ ‘ನಿನಗಾಗಿ’ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

‘ನಿನಗಾಗಿ’ ಧಾರಾವಾಹಿಯ ಕಥೆಯೇನು? 

ದಿವ್ಯಾ ಉರುಡುಗ ‘ನಿನಗಾಗಿ’ ಧಾರಾವಾಹಿಯಲ್ಲಿ ರಚನಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ನಿನಗಾಗಿ’ ಧಾರಾವಾಹಿಯ ಕಥೆ ಸೂಪರ್ ಸ್ಟಾರ್ ರಚನಾ ಸುತ್ತ ಸುತ್ತಲಿದೆ. ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ರಚನಾಗೆ ಕೋಟ್ಯಂತರ ಅಭಿಮಾನಿಗಳ ಪ್ರೀತಿ, ಆಶೀರ್ವಾದ ಇದೆ. ಆದರೆ, ಅದ್ಯಾಕೋ ರಚನಾಗೆ ಅಮ್ಮನ ಪ್ರೀತಿ ಇಲ್ಲ. ಸೂಪರ್ ಸ್ಟಾರ್ ಆಗಿದ್ದರೂ, ಅಮ್ಮನ ಪ್ರೀತಿ ಕಾಣದ ನಟಿಯ ಕಥೆಯ ಸುತ್ತ ‘ನಿನಗಾಗಿ’ ಧಾರಾವಾಹಿ ಸಾಗಲಿದೆ. ಬೇರೆ ಬೇರೆ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸಾಗುವ ಮನ ಮಿಡಿಯ ಧಾರಾವಾಹಿ ‘ನಿನಗಾಗಿ’ ಎಂಬುದು ದಿವ್ಯಾ ಉರುಡುಗ ಮತ್ತು ‘ನಿನಗಾಗಿ’ ಧಾರಾವಾಹಿ ತಂಡದ ಒಕ್ಕೊರಲ ಮಾತು.

ಹೊಸ ಪಾತ್ರದ ಮೇಲೆ ದಿವ್ಯಾ ನಿರೀಕ್ಷೆಯ ಮಾತು

ಇನ್ನು ‘ನಿನಗಾಗಿ’ ಧಾರಾವಾಹಿಯ ಪ್ರಸಾರಕ್ಕೂ ಮುನ್ನ ತಮ್ಮ ಹೊಸ ಪಾತ್ರದ ಬಗ್ಗೆ ಮಾತನಾಡಿರುವ ದಿವ್ಯಾ ಉರುಡುಗ, ʼನನಗೆ ಹೆಮ್ಮೆ ಅನಿಸುತ್ತದೆ. ಪ್ರತಿ ವಿಷಯದಲ್ಲಿಯೂ ಯೂನಿಕ್ ಆಗಿ ಮಾಡುತ್ತಿದ್ದೇವೆ. ರಚ್ಚು ಎಂಬ ಮುದ್ದಾದ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ರಚ್ಚು ಎಂಬ ಸೂಪರ್ ಸ್ಟಾರ್ ಸಿಂಪಲ್ ಆಗಿ ಲೈಫ್ ಲೀಡ್ ಮಾಡುವ ಕನಸು ಕಾಣುತ್ತಾ ಇರುತ್ತಾಳೆ. ಅಮ್ಮನ ಮಾತೇ ವೇದ ವಾಕ್ಯ.‌ ಆ ರೀತಿ ಪಾತ್ರ ನನ್ನದು. ಅವಳ ವೈಯಕ್ತಿಕ ಜೀವನ, ಅವಳ ಆಸೆ ನೆರವೇರುತ್ತಾ? ಅನ್ನೋದನ್ನು ನೀವು ನೋಡ್ಬೇಕು.‌ಒಂದೊಳ್ಳೆ ತಂಡದ ಜೊತೆ ಕೆಲಸ‌ ಮಾಡುತ್ತಿರುವ ಖುಷಿ ಇದೆ. ಸಿನಿಮಾ ರೀತಿಯೇ ಸೀರಿಯಲ್ ಶೂಟ್ ಮಾಡಲಾಗುತ್ತಿದೆʼ ಎಂದಿದ್ದಾರೆ.

ಮೇ. 27ರಿಂದ ‘ಕಲರ್ಸ್ ಕನ್ನಡʼದಲ್ಲಿ ‘ನಿನಗಾಗಿ’ ಧಾರಾವಾಹಿ ಶುರು…

ಇದೇ ಮೇ ತಿಂಗಳ  27ನೇ ತಾರೀಖಿನಿಂದ ‘ನಿನಗಾಗಿ’ ಧಾರಾವಾಹಿ ಶುರುವಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ  ಪ್ರತಿದಿನ  ರಾತ್ರಿ 8 ಗಂಟೆಗೆ ‘ನಿನಗಾಗಿ’ ಸೀರಿಯಲ್  ಪ್ರಸಾರವಾಗಲಿದೆ. ‘ನಿನಗಾಗಿ’ ಸೀರಿಯಲ್ ನಲ್ಲಿ ದಿವ್ಯಾ ಉರುಡುಗ ಅವರ ಜೊತೆ ʼಗಟ್ಟಿಮೇಳʼ ಧಾರಾವಾಹಿಯ ʼಶಿವರಾಮ್ʼ ಪಾತ್ರದ ಖ್ಯಾತಿಯ ನಟ ಋತ್ವಿಕ್ ಮಠದ್  ನಾಯಕಾನಾಗಿ ಅಭಿನಯಿಸುತ್ತಿದ್ದಾರೆ.

ಉಳಿದಂತೆ ಪ್ರಿಯಾಂಕ ಕಾಮತ್, ಕಿಶನ್ ಬೆಳಗಲಿ, ವಿಜಯ್ ಕೌಂಡಿನ್ಯ, ಸಿರಿ ಸಿಂಚನ ಮುಂತಾದವರು ‘ನಿನಗಾಗಿ’ ಧಾರಾವಾಹಿಯ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕಿರುತೆರೆಯಲ್ಲಿʼನಮ್ಮನೆ ಯುವರಾಣಿʼಯನ್ನು ನಿರ್ದೇಶಿಸಿದ್ದ ಸಂಪೃಥ್ವಿ ‘ನಿನಗಾಗಿʼ ಧಾರಾವಾಹಿಯ ಸೂತ್ರಧಾರಿ. ʼಭಾಗ್ಯಲಕ್ಷ್ಮಿʼ, ʼನಮ್ಮನೆ ಯುವರಾಣಿʼ, ʼಕನ್ನಡತಿʼಯಂಥ ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದ ʼಜೈ ಮಾತಾ ಕಂಬೈನ್ಸ್ʼ ಸಂಸ್ಥೆ ‘ನಿನಗಾಗಿʼ ಧಾರಾವಾಹಿಯ ನಿರ್ಮಾಣದ ಹೊಣೆ ಹೊತ್ತಿದೆ.

 

Related Posts

error: Content is protected !!