ಹೊಸ ಚಿತ್ರಕ್ಕೆ ಡಾಲಿ ತಯಾರಿ
ಟಿ. ಎಸ್. ನಾಗಾಭರಣ ಸಾರಥ್ಯದಲ್ಲಿ ತೆರೆಗೆ ಬಾರುತ್ತಿದೆ ಮತ್ತೊಂದು ಐತಿಹಾಸಿಕ ಸಿನೆಮಾ
ಇತ್ತೀಚೆಗಷ್ಟೇ ‘ಕೋಟಿ’ ಸಿನೆಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ನಟ ಡಾಲಿ ಧನಂಜಯ, ಶೀಘ್ರದಲ್ಲಿಯೇ ಐತಿಹಾಸಿಕ ಪಾತ್ರವೊಂದರ ಮೂಲಕ ಪ್ರೇಕ್ಷಕರ ಮುಂದೆ ಬರಲು ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ನಟ ಡಾಲಿ ಧನಂಜಯ ಅಭಿನಯಿಸುತ್ತಿರುವ ಹೊಸ ಸಿನೆಮಾಕ್ಕೆ ‘ನಾಡಪ್ರಭು ಕೆಂಪೇಗೌಡ’ ಎಂದು ಹೆಸರಿಡಲಾಗಿದ್ದು, ಇದೀಗ ಈ ಸಿನೆಮಾದ ಟೈಟಲ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಮತ್ತೊಂದು ಐತಿಹಾಸಿಕ ಪಾತ್ರಕ್ಕೆ ಡಾಲಿ ತಯಾರಿ…
ಅಂದಹಾಗೆ, ಕೆಲ ವರ್ಷಗಳ ಹಿಂದೆ ನಟ ಡಾಲಿ ಧನಂಜಯ್ ‘ಅಲ್ಲಮ’ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಟಿ. ಎಸ್. ನಾಗಾಭರಣ ನಿರ್ದೇಶನದ ಈ ಸಿನೆಮಾದಲ್ಲಿ ಧನಂಜಯ್ ‘ಅಲ್ಲಮ ಪ್ರಭು’ ಪಾತ್ರದಲ್ಲಿ ಗಮನ ಸೆಳೆದಿದ್ದರು. ಅದಾದ ಬಳಿಕ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಸಿನೆಮಾಗಳು ಮತ್ತು ಹೊಸಥರದ ಪಾತ್ರಗಳತ್ತ ಮುಖ ಮಾಡಿದ್ದ ಧನಂಜಯ್, ಮಾಸ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಅಂಥದ್ದೇ ಐತಿಹಾಸಿಕ ಸಿನೆಮಾದತ್ತ ಮುಖ ಮಾಡಿರುವ ಧನಂಜಯ್, ಈ ಬಾರಿ ‘ನಾಡಪ್ರಭು ಕೆಂಪೇಗೌಡ’ ಸಿನಿಮಾದಲ್ಲಿ ‘ಕೆಂಪೇಗೌಡ’ನಾಗಿ ಕಾಣಿಸಿಕೊಳ್ಳಲು ತಯಾರಾಗುತ್ತಿದ್ದಾರೆ.
ನನಸಾಗುತ್ತಿದೆ ನಾಗಾಭರಣ ಎರಡು ದಶಕದ ಕನಸು…
ಇನ್ನು ‘ನಾಡಪ್ರಭು ಕೆಂಪೇಗೌಡ’ ಅವರ ಜೀವನಗಾಥೆಯನ್ನು ಸಿನೆಮಾದ ಮೂಲಕ ತೆರೆಗೆ ತರಬೇಕು ಎಂಬುದು ಹಿರಿಯ ನಿರ್ದೇಶಕ ಟಿ. ಎಸ್. ನಾಗಾಭರಣ ಅವರ ಸುಮಾರು ಇಪ್ಪತ್ತು ವರ್ಷಗಳ ಕನಸು. ಈ ಸಿನೆಮಾವನ್ನು ಮಾಡಲು ಟಿ. ಎಸ್. ನಾಗಾಭರಣ ತೆರೆಮರೆಯಲ್ಲಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಈ ಸಿನೆಮಾ ತೆರೆಗೆ ಬರಲು ತಡವಾಯಿತು. ಇದೀಗ ‘ನಾಡಪ್ರಭು ಕೆಂಪೇಗೌಡ’ ಸಿನೆಮಾದ ಚಿತ್ರೀಕರಣಕ್ಕೆ ಚಿತ್ರತಂಡ ಅಣಿಯಾಗಿದೆ. ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಅವರೇ ‘ನಾಡಪ್ರಭು ಕೆಂಪೇಗೌಡ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಕೆಂಪೇಗೌಡ ಕುರಿತಾಗಿ ಸಿನೆಮಾ ಮಾಡಬೇಕೆಂಬ ಭರಣ ಅವರ ಎರಡು ದಶಕದ ಕನಸು ಈಗ ನನಸಾಗುತ್ತಿದೆ. ಅದಕ್ಕೆ ಧನಂಜಯ್ ಸಾಥ್ ನೀಡುತ್ತಿದ್ದಾರೆ.

ಅಂತಿಮ ಹಂತದ ಪ್ರೀ-ಪ್ರೊಡಕ್ಷನ್ ನಲ್ಲಿ ‘ನಾಡಪ್ರಭು ಕೆಂಪೇಗೌಡ’
ಈಗಾಗಲೇ ‘ನಾಡಪ್ರಭು ಕೆಂಪೇಗೌಡ’ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ಆಗಸ್ಟ್ ವೇಳೆಗೆ ‘ನಾಡಪ್ರಭ ಕೆಂಪೇಗೌಡ’ ಸಿನೆಮಾದ ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದೆ. ಇನ್ನು ‘ನಾಡಪ್ರಭು ಕೆಂಪೇಗೌಡ’ ಸಿನೆಮಾಕ್ಕೆ ’ಬೆಂಗಳೂರು ಕಾರಣಿಕ’ ಎಂಬ ಅಡಿಬರಹವಿದೆ. ಡಾ. ಎಂ. ಎನ್. ಶಿವರುದ್ರಪ್ಪ ಹಾಗೂ ಶುಭಂ ಗುಂಡಾಲ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಶಶಿಧರ ಅಡಪ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ. ಉಳಿದಂತೆ ‘ನಾಡಪ್ರಭ ಕೆಂಪೇಗೌಡ’ ಸಿನೆಮಾದ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ತೆರೆಮರೆಯಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆಯಿದೆ.