ಆಗಸ್ಟ್ 09ಕ್ಕೆ ಬರುತ್ತಿದ್ದಾನೆ ‘ಭೀಮ’

ಆಗಸ್ಟ್ 09ಕ್ಕೆ ‘ಭೀಮ’ ಬಿಡುಗಡೆ;
ಕೊನೆಗೂ ಥಿಯೇಟರಿನಲ್ಲಿ‘ಭೀಮ’ ನ ಬಲ ಪ್ರದರ್ಶನಕ್ಕೆ ದಿನಾಂಕ ಫಿಕ್ಸ್
‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರದ ಬಿಡುಗಡೆ ಯಾವಾಗ? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅಂದಹಾಗೆ, ‘ಭೀಮ’ ಸಿನೆಮಾ ಇದೇ ಆಗಸ್ಟ್ 09ಕ್ಕೆ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಹೌದು, ಚಿತ್ರತಂಡದ ಪ್ಲಾನ್ ಪ್ರಕಾರ ಎಲ್ಲವೂ ನಡೆದಿದ್ದರೆ, ‘ಭೀಮ’ ಸಿನೆಮಾ ಬಿಡುಗಡೆಯಾಗಿ ಇಷ್ಟೊತ್ತಿಗಾಗಲೇ ತಿಂಗಳುಗಳೇ ಕಳೆದಿರಬೇಕಿತ್ತು. ಆದರೆ ಚಿತ್ರತಂಡದ ಯೋಜನೆ ಒಂದಿದ್ದರೆ, ಆಗಿದ್ದೇ ಮತ್ತೊಂದು!
ಬಹುತೇಕರಿಗೆ ಗೊತ್ತಿರುವಂತೆ, ‘ಭೀಮ’ ಚಿತ್ರದ ‘ಬ್ಯಾಡ್ ಬಾಯ್ಸ್’ ಚಿತ್ರದ ಮೊದಲ ಹಾಡು, ಕಳೆದ ವರ್ಷದ ಗೌರಿ-ಗಣೇಶ ಹಬ್ಬದ ದಿನದಂದು ಬಿಡುಗಡೆ ಆಗಿತ್ತು. ಆ ನಂತರ ಇನ್ನೊಂದೆರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿತ್ತು. ‘ಭೀಮ’ ಚಿತ್ರದ ಹಾಡುಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡರೂ, ಸಿನೆಮಾದ ಹಾಡುಗಳು ಮಾಸ್ ಆಡಿಯನ್ಸ್ ಗಮನ ಸೆಳೆದಿದ್ದರೂ, ಚಿತ್ರದ ಬಿಡುಗಡೆ ಪಕ್ಕಾ ಆಗದ ಕಾರಣ, ಆ ಬಳಿಕ ಚಿತ್ರದ ಪ್ರಚಾರವನ್ನು ಚಿತ್ರತಂಡ ಅಲ್ಲಿಗೆ ನಿಲ್ಲಿಸಿ ಸುಮ್ಮನಾಗಿತ್ತು.
ಮತ್ತೆ ಚುರುಕುಗೊಂಡ ‘ಭೀಮ’ನ ಪ್ರಚಾರ
ಇದೀಗ ಇದೇ ಆಗಸ್ಟ್ 09ಕ್ಕೆ ‘ಭೀಮ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರಚಾರ ಮತ್ತೆ ಶುರು ಆಗಲಿದ್ದು, ಹಾಡು, ಟೀಸರ್ ಮತ್ತು ಟ್ರೇಲರ್ ಮುಂದಿನ ಒಂದೂವರೆ ತಿಂಗಳಲ್ಲಿ ಬಿಡುಗಡೆ ಆಗಲಿದೆ.
‘ಭೀಮ’ನ ಬಿಡುಗಡೆ ತಡವಾಗಿದ್ದು ಯಾಕೆ?
‘ಭೀಮ’ ಚಿತ್ರದ ಚಿತ್ರೀಕರಣ ಮತ್ತು ಬೇರೆ ಕೆಲಸಗಳು ಮುಗಿದು ಕೆಲವು ತಿಂಗಳುಗಳೇ ಆದರೂ, ಚಿತ್ರತಂಡ ಅದ್ಯಾಕೋ ಚಿತ್ರ ಬಿಡುಗಡೆ ಮಾಡುವ ಮನಸ್ಸು ಮಾಡಿರಲಿಲ್ಲ. ಚಿತ್ರದ ಬ್ಯುಸಿನೆಸ್ ಆಗದಿರುವ ಕಾರಣ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ ಎಂಬ ಮಾತುಗಳು ಗಾಂದಿನಗರದಲ್ಲಿ ಕೇಳಿ ಬರುತ್ತಲೇ ಇತ್ತು. ಆದರೆ ಈ ಬಗ್ಗೆ ‘ಭೀಮ’ ಚಿತ್ರದ ತಂಡ ಮಾತ್ರ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಈಗ ಚಿತ್ರದ ಬ್ಯುಸಿನೆಸ್ ಲೆಕ್ಕಾಚಾರ ಏನಾಗಿದೆಯೋ ಗೊತ್ತಿಲ್ಲ, ಚಿತ್ರತಂಡದವರು ಮಾತ್ರ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಚಿತ್ರವು ಆಗಸ್ಟ್ 15ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಸುದ್ದಿ ಇತ್ತು. ಈಗ ನೋಡಿದರೆ ಚಿತ್ರತಂಡದವರೇ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದು, ಆಗಸ್ಟ್ 09ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
‘ಸಲಗ’ನ ನಂತರ ‘ಭೀಮ’ನ ಮೇಲೆ ದುನಿಯಾ ವಿಜಯ್ ನಿರೀಕ್ಷೆ
‘ಸಲಗ’ ನಂತರ ವಿಜಯ್ ನಿರ್ದೇಶಿಸುತ್ತಿರುವ ಎರಡನೆಯ ಕಥೆ ಇದು. ಆ ಚಿತ್ರದ ತರಹ ಇದು ಸಹ ಭೂಗತ ಲೋಕದ ಕುರಿತಾಗಿದ್ದು ಈ ಚಿತ್ರಕ್ಕೆ ‘ದುನಿಯಾ’ ವಿಜಯ್ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದು, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ರಂಗಪ್ರತಿಭೆ ಅಶ್ವಿನಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಈ ಚಿತ್ರಕ್ಕಿದೆ. ‘ಭೀಮ’ ಚಿತ್ರವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜೊತೆಯಾಗಿ ನಿರ್ಮಿಸಿದ್ದಾರೆ. ಸದ್ಯ ‘ಸಲಗ’ ನಂತರ ವಿಜಯ್ ಮತ್ತು ತಂಡಕ್ಕೆ ‘ಭೀಮ’ ಸಿನೆಮಾದ ಮೇಲೆ ಸಹಜವಾಗಿಯೇ ಒಂದಷ್ಟು ದೊಡ್ಡ ನಿರೀಕ್ಷೆ ಮನೆಮಾಡಿದ್ದು, ‘ಭೀಮ’ನ ಆರ್ಭಟ ಥಿಯೇಟರಿನಲ್ಲಿ ಹೇಗಿರಲಿದೆ ಎಂಬುದು ಆಗಸ್ಟ್ 09ರ ನಂತರ ಗೊತ್ತಾಗಲಿದೆ.