‘ಬಿಗ್ ಬಾಸ್’ ಮನೆಯಿಂದ ಮತ್ತೆ ಬಿಗ್ ಸ್ಕ್ರೀನ್‌ನತ್ತ ಕಾರ್ತಿಕ್ ಮಹೇಶ್

‘ರಾಮರಸ’ ಸಿನೆಮಾಕ್ಕೆ ಕಾರ್ತಿಕ್ ಮಹೇಶ್ ನಾಯಕ
ಗುರುದೇಶಪಾಂಡೆ ಬ್ಯಾನರಿನ ಹೊಸ ಚಿತ್ರ
ಕಳೆದ ವರ್ಷ ‘ಬಿಗ್ ಬಾಸ್’ ಮನೆಗೆ ಹೋಗುವ ಮೊದಲೇ ಕಾರ್ತಿಕ್, ‘ಡೊಳ್ಳು’ ಎಂಬ ಚಿತ್ರದಲ್ಲಿ ನಟಿಸಿದ್ದರು. ‘ಒಂದು ಸರಳ ಪ್ರೇಮಕಥೆ’ಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ರಾಮರಸ’ಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರತಂಡ ‘ರಾಮರಸ’ ಸಿನೆಮಾದ ನಾಯಕನನ್ನು ಪರಿಚಯಿಸುವ ಟೀಸರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನಟ ಕಿಚ್ಚ ಸುದೀಪ್ ‘ರಾಮರಸ’ ಸಿನೆಮಾದ ನಾಯಕನನ್ನು ಪರಿಚಯಿಸುವ ಟೀಸರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಸಿನೆಮಾದ ನಾಯಕನನ್ನು ಪರಿಚಯಿಸಿದ ಸುದೀಪ್
‘ರಾಮರಸ’ ಸಿನೆಮಾದ ನಾಯಕನನ್ನು ಪರಿಚಯಿಸುವ ಟೀಸರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ನಟ ಸುದೀಪ್, ‘ನಾನು ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಖುಷಿಖುಷಿಯಾಗಿ ನಡೆಸಿಕೊಡುತ್ತೇನೆ. ಆದರೆ, ಪ್ರತಿ ಸೀಸನ್‍ನಲ್ಲೂ ಒಬ್ಬ ಹೀರೋ ಹುಟ್ಟಿಕೊಳ್ಳುತ್ತಾನೆ ಮತ್ತು ಅದೇ ದೊಡ್ಡ ತಲೆನೋವು. ‘ಬಿಗ್ ಬಾಸ್’ ಗೆಲ್ಲೋದು ಅಂದ್ರೆ ಸಾಮಾನ್ಯವಲ್ಲ. ಅದು ನಟನೆ ಅಲ್ಲ, ಸತ್ಯವೂ ಅಲ್ಲ. ಅವೆರಡರ ಮಧ್ಯೆ ನಡೆಯುವ ಜೀವನ. ಅಲ್ಲಿರೋದೇ ಕಷ್ಟ. ಇನ್ನು ಗೆಲುವುದಂತೂ ಬಹಳ ಕಷ್ಟ. ಅದರಲ್ಲೂ ಕಾರ್ತಿಕ್‍ಗೆ ಇದ್ದ ಸ್ಪರ್ಧಿಗಳು ಅವರಿಗೇ ಗೊತ್ತು. ಗೆಲ್ಲೋದು ಒಂದು ಕಡೆಯಾದರೆ, ಗೆದ್ದು ಬಂದ ಮೇಲ ಭವಿಷ್ಯವನ್ನು ಇನ್ನೂ ಚೆನ್ನಾಗಿ ರೂಪಿಸಿಕೊಳ್ಳೋಕೆ ಆಗಲೇ ಇಲ್ಲ. ಗೆದ್ದವರಲ್ಲಿ ಕಡಿಮೆ ಜನರಿಗೆ ಭವಿಷ್ಯ ರೂಪಿಸಿಕೊಳ್ಳೋಕೆ ಆಗಲಿಲ್ಲ. ಆ ನಿಟ್ಟಿನಲ್ಲಿ ಕಾರ್ತಿಕ್ ಅದೃಷ್ಟವಂತ ಅನ್ನೋದಕ್ಕಿಂತ ಸ್ಮಾರ್ಟ್ ಎಂದರೆ ತಪ್ಪಿಲ್ಲ. ಗೆಲ್ಲುವುದರ ಜೊತೆಗೆ ಸರಿಯಾದ ಹಾದಿಯಲ್ಲಿದ್ದಾರೆ. ಅವರು ಒಂದಿಷ್ಟು ಪ್ಯಾಷನೇಟ್ ಜನರ ಕೈಯಲ್ಲಿದ್ದಾರೆ. ಶ್ರಮಕ್ಕೆ ಪರ್ಯಾಯವಿಲ್ಲ. ಇದನ್ನು ಚೆನ್ನಾಗಿ ಬಳಸಿಕೊಳ್ಳಿ’ ಎಂದು ಹಾರೈಸಿದರು.
ಹಾರರ್ ಕಾಮಿಡಿ ‘ರಾಮರಸ’ದ ಮೇಲೆ ಕಾರ್ತಿಕ್ ನಿರೀಕ್ಷೆ
ಇದೇ ವೇಳೆ ಕಾರ್ತಿಕ್ ಮಹೇಶ್ ಮಾತನಾಡಿ, ‘ಇದು ನನ್ನ ಮರುಪರಿಚಯ. ಈ ಚಿತ್ರದಲ್ಲಿ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಗಳು. ಗಿರಿರಾಜ್ ಅವರಿಗೆ ಕ್ಲಾರಿಟಿ ಇದೆ. ಅವರಿಗೆ ತುಂಬಾ ಪ್ರಶ್ನೆಗಳನ್ನು ಕೇಳುತ್ತೀನಿ. ಪ್ರತಿ ದೃಶ್ಯವನ್ನೂ ಅವರು ಚೆನ್ನಾಗಿ ಶೂಟ್ ಮಾಡಿದ್ದಾರೆ’ ಎಂದರು.
‘ರಾಮರಸ’ ಒಂದು ಹಾರಾರ್ ಕಾಮಿಡಿ ಜಾನರಿನ ಚಿತ್ರವಾಗಿದ್ದು, ಬಿ. ಎಂ ಗಿರಿರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ʼಜಿ ಅಕಾಡೆಮಿʼಯ 16 ಜನ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ‘ರಾಮರಸ’ ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ, ಎ.ವಿ. ಕೃಷ್ಣಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ.