ʼಪುಣ್ಯಪಾದʼದತ್ತ ಸಿದ್ದು ಪೂರ್ಣಚಂದ್ರ ಚಿತ್ತ!

ಸಿದ್ದು ಪೂರ್ಣಚಂದ್ರ ನಿರ್ದೇಶನದ ಹೊಸ ಚಿತ್ರ ʼಈ ಪಾದ ಪುಣ್ಯಪಾದʼ
ಮತ್ತೊಂದು ವಿಭಿನ್ನ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಚಿತ್ತ!
ಈ ಹಿಂದೆ ಕನ್ನಡದಲ್ಲಿ ʼದಾರಿ ಯಾವುದಯ್ಯ ವೈಕುಂಠಕೆʼ, ʼಬ್ರಹ್ಮ ಕಮಲʼ, ʼತಾರಿಣಿʼ ಮೊದಲಾದ ಸದಭಿರುಚಿ ಸಿನೆಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಬಾರಿ ʼಈ ಪಾದ ಪುಣ್ಯಪಾದʼ ಎಂಬ ಮತ್ತೊಂದು ವಿಭಿನ್ನ ಕಥಾಹಂದರದ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಈಗಾಗಲೇ ಸದ್ದಿಲ್ಲದೆ ʼಈ ಪಾದ ಪುಣ್ಯಪಾದʼ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಸಿದ್ದು ಪೂರ್ಣಚಂದ್ರ, ಇದೀಗ ʼಈ ಪಾದ ಪುಣ್ಯಪಾದʼ ಸಿನೆಮಾದ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.
ನಿರ್ದೇಶಕ ಶಶಾಂಕ್ ಕೈಯಲ್ಲಿʼಪುಣ್ಯಪಾದʼ ಟೈಟಲ್ ಅನಾವರಣ
ಇತ್ತೀಚೆಗೆ ನಿರ್ದೇಶಕ ಶಶಾಂಕ್ ʼಈ ಪಾದ ಪುಣ್ಯಪಾದʼ ಸಿನೆಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ʼಪೂರ್ಣಚಂದ್ರ ಫಿಲಂಸ್ʼ ಬ್ಯಾನರಿನಲ್ಲಿ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ʼಈ ಪಾದ ಪುಣ್ಯಪಾದʼ ಸಿನೆಮಾಕ್ಕೆಅನಂತ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸಿನೆಮಾಕ್ಕೆ ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ದೀಪಕ್ ಸಿ. ಎಸ್ ಸಂಕಲನವಿದೆ. ಸದ್ಯ ʼಈ ಪಾದ ಪುಣ್ಯಪಾದʼ ಸಿನೆಮಾದ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಸಿನೆಮಾದ ಕುರಿತು ಇನ್ನಷ್ಟು ಮಾಹಿತಿ ಹೊರಬರಲಿದೆ. ಇದೇ ಜುಲೈ ವೇಳೆಗೆ ʼಈ ಪಾದ ಪುಣ್ಯಪಾದʼ ಸಿನೆಮಾದ ಚಿತ್ರೀಕರಣ ಆರಂಭವಾಗಲಿದ್ದು, ಇದೇ ವರ್ಷಾಂತ್ಯಕ್ಕೆ ʼಈ ಪಾದ ಪುಣ್ಯಪಾದʼ ಸಿನೆಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.