Indian 2 Trailer Out ; ವಿಭಿನ್ನ ಗೆಟಪ್‌ನಲ್ಲಿ ಕಮಲ್ ಕಮಾಲ್!

ʼಇಂಡಿಯನ್ 2ʼ ಟ್ರೇಲರಿನಲ್ಲಿ ಗಮನ ಸೆಳೆದ ಕಮಲ್ ಹಾಸನ್
ಉಲಗನಾಯಗನ್ ಹೊಸ ಸಿನೆಮಾದ ಮೇಲೆ ಗರಿಗೆದರಿದ ನಿರೀಕ್ಷೆ
ನಟ ʼಉಲಗನಾಯಗನ್ʼ ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ʼಇಂಡಿಯನ್ 2ʼ ಸಿನಿಮಾ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. ಅಂದಹಾಗೆ, ʼಲೈಕಾ ಪ್ರೊಡಕ್ಷನ್ಸ್ʼ ಮತ್ತು ʼರೆಡ್ ಜೈಂಟ್ ಮೂವೀಸ್ʼ ನಿರ್ಮಿಸಿರುವ ʼಇಂಡಿಯನ್ 2ʼ ಸಿನೆಮಾ, ಇದೇ ಜುಲೈ 12 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
1996ರಲ್ಲಿ ಕಮಲ್ ಹಾಸನ್ ನಟನೆಯ ‘ಇಂಡಿಯನ್’ ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದೀಗ ಸುಮಾರು 28 ವರ್ಷಗಳ ಬಳಿಕ ʼಇಂಡಿಯನ್ʼ ಸಿನೆಮಾಕ್ಕೆ ಸೀಕ್ವೆಲ್ ಸಿದ್ಧವಾಗಿದ್ದು, ʼಇಂಡಿಯನ್ 2ʼ ಹೆಸರಿನಲ್ಲಿ ಚಿತ್ರ ಜುಲೈ 12ರಂದು ಬಿಡುಗಡೆ ಆಗಿ ತೆರೆಗೆ ಬರುತ್ತಿದೆ.
ಭರ್ಜರಿಯಾಗಿ ನಡೆಯುತ್ತಿದೆ ʼಇಂಡಿಯನ್ 2ʼ ಪ್ರಚಾರ
ಈಗಾಗಲೇ ʼಇಂಡಿಯನ್ 2ʼ ಸಿನೆಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಕಳೆದ ಎರಡು-ಮೂರು ತಿಂಗಳಿನಿಂದ ಭರ್ಜರಿಯಾಗಿ ಸಿನೆಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಸದ್ಯ ʼಇಂಡಿಯನ್ 2ʼ ಸಿನೆಮಾದ ಪ್ರಚಾರದ ಭಾಗವಾಗಿ, ಕಮಲ್ ಹಾಸನ್ ಅಭಿನಯದ ʼಇಂಡಿಯನ್-2ʼ ಸಿನೆಮಾದ ಟ್ರೇಲರ್ (Indian 2 Trailer) ಬಿಡುಗಡೆಗೊಂಡಿದೆ. ಈ ಟ್ರೇಲರಿನಲ್ಲಿ ಕಮಲ್ ಹಾಸನ್ ಹಲವು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ಇಂಡಿಯನ್ 2’ನಲ್ಲಿ ಏನಿದೆ..?
ದೇಶದಾದ್ಯಂತ ನಡೆಯುತ್ತಿರುವ ಅನೇಕ ಅಪರಾಧಗಳು ಮತ್ತು ವಂಚನೆಗಳ ಚಿತ್ರಣ ‘ಇಂಡಿಯನ್ 2’ ಸಿನೆಮಾದಲ್ಲಿದೆ. ಪ್ರಸ್ತುತ ಭಾರತೀಯರು ಹೋರಾಡುತ್ತಿರುವ ಉದ್ಯೋಗಗಳ ಕೊರತೆ, ಭಾರೀ ತೆರಿಗೆ ಹೊರೆಗಳು ಮತ್ತು ಇತರ ಮೂಲಭೂತ ಸೌಲಭ್ಯಗಳ ಕೊರತೆಯಂತಹ ಸಮಸ್ಯೆಗಳ ವಿವರಣೆಗಳನ್ನು ‘ಇಂಡಿಯನ್ 2’ ಸಿನೆಮಾದ ಟ್ರೇಲರಿನಲ್ಲಿ ಬಿಚ್ಚಿಡಲಾಗಿದೆ.
ಮೇಲ್ನೋಟಕ್ಕೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಸಿನಿಮಾ ‘ಇಂಡಿಯನ್ 2’ ಸಿನೆಮಾ ಹೊಂದಿದ್ದು, ಕಮಲ್ ಹಾಸನ್ ಅವರು ಬೇರೆ ಬೇರೆ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಒಟ್ಟಾರೆ ಒಂದೇ ಮಾತಿನಲ್ಲಿ ಹೇಳುವುದಾದರೆ, ಕಮಲ್ ಹಾಸನ್ ಅವರು ಯಾವುದೇ ರೀತಿಯ ಪಾತ್ರ ಕೊಟ್ಟರೂ ಮಾಡಿ ತೋರಿಸುತ್ತಾರೆ. ಇದಕ್ಕೆ ‘ಇಂಡಿಯನ್ 2’ ಮತ್ತೊಂದು ಉದಾಹರಣೆ ಎನ್ನಬಹುದು.
ಬೃಹತ್ ಕಲಾವಿದರು, ತಂತ್ರಜ್ಞರ ಸಮಾಗಮ
ʼಇಂಡಿಯನ್ 2ʼ ಸಿನೆಮಾದಲ್ಲಿ ನಟ ಕಮಲ್ ಹಾಸನ್ ಅವರೊಂದಿಗೆ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಸಿದ್ಧಾರ್ಥ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಜಾಕಿರ್ ಹುಸೇನ್, ಗುರು ಸೋಮಸುಂದರಾಮ್, ದೆಹಲಿ, ಗುರು ಸೋಮಸುಂದರಾಮ್ ಮಿಶ್ರಾ, , ಜಯಪ್ರಕಾಶ್, ಮನೋಬಾಲಾ, ಅಶ್ವಿನಿ ತಂಗರಾಜ್ ಹೀಗೆ ದೊಡ್ಡ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ʼಇಂಡಿಯನ್ 2ʼ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಅದ್ಧೂರಿ ಮೇಕಿಂಗ್ ಚಿತ್ರ ಜುಲೈ 12ಕ್ಕೆ ತೆರೆಗೆ
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ʼಇಂಡಿಯನ್ 2ʼ ಸಿನೆಮಾವನ್ನು ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆಗಳಾದ ʼಲೈಕಾ ಪ್ರೊಡಕ್ಷನ್ಸ್ʼ ಮತ್ತು ʼರೆಡ್ ಜೈಂಟ್ ಮೂವೀಸ್ʼ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿವೆ. ʼಇಂಡಿಯನ್ 2ʼ ಸಿನೆಮಾ ಇದೇ 2024ರ ಜುಲೈ 12 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದೆದು, ವಿಶ್ವದಾದ್ಯಂತ ಸುಮಾರು 2000 ಕ್ಕೂ ಅಧಿಕ ತೆರೆಗಳಲ್ಲಿ ʼಇಂಡಿಯನ್ 2ʼ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಮತ್ತೊಮ್ಮೆ ಶಂಕರ್ ಚಿತ್ರದಲ್ಲಿ ಸಿದ್ಧಾರ್ಥ್
ಸಿದ್ಧಾರ್ಥ್ ಇಂಡಿಯನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ʼಬಾಯ್ಸ್ʼ ಸಿನಿಮಾದಲ್ಲಿ ಸಿದ್ಧಾರ್ಥ್ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್ ಹಾಗೂ ಸಿದ್ಧಾರ್ಥ್ ಒಟ್ಟಿಗೆ ಕೆಲಸ ಮಾಡುವಂತಾಗಿದೆ.