‘ಮರ್ಯಾದೆ ಪ್ರಶ್ನೆ’ ತಾರಾಬಳಗ ಪರಿಚಯಿಸಿದ ಚಿತ್ರತಂಡ

ಆರ್ ಜೆ ಪ್ರದೀಪ್ ‘ಮರ್ಯಾದೆ ಪ್ರಶ್ನೆ’ಯಲ್ಲಿ ಪ್ರತಿಭಾನ್ವಿತರ ದಂಡು…
ಭಿನ್ನ ಪಥದ ಮೂಲಕವೇ ಪ್ರೇಕ್ಷಕರನ್ನು ಮುಖಾಮುಖಿಯಾಗ ಹೊರಟಿರುವ ಸಿನಿಮಾಗಳ ಸಾಲಿನಲ್ಲಿ ಸದ್ಯಕ್ಕೆ `ಮರ್ಯಾದೆ ಪ್ರಶ್ನೆ’ ಪ್ರಧಾನವಾಗಿ ಕಾಣಿಸುತ್ತಿದೆ. ಅತೀವ ಸಿನಿಮಾ ಆಸಕ್ತಿಯಿಂದ ನಾಗರಾಜ್ ಸೋಮಯಾಜಿ ನಿರ್ದೇಶನದ ಈ ಚಿತ್ರವನ್ನು ಆರ್. ಜೆ ಪ್ರದೀಪ್ ನಿರ್ಮಾಣ ಮಾಡಿದ್ದಾರೆ. ಶುರುವಾತಿನಿಂದ ಇಲ್ಲಿಯವರೆಗೂ ‘ಮರ್ಯಾದೆ ಪ್ರಶ್ನೆ’ ಬಗ್ಗೆ ಪ್ರೇಕ್ಷಕರೆಲ್ಲರ ಗಮನ ಸುಳಿದಾಡುವಂತೆ ಮಾಡಿಕೊಂಡು ಬರಲಾಗುತ್ತಿದೆ. ಇದೊಂದು ವಿಭಿನ್ನ ಕಥಾನಕವನ್ನು ಒಳಗೊಂಡಿರುವ ಚಿತ್ರವೆಂಬ ಸೂಚನೆಯೂ ಈಗಾಗಲೇ ರವಾನೆಯಾಗಿದೆ. ಈ ಹೊತ್ತಿನಲ್ಲಿ ಚಿತ್ರತಂಡ ಖುಷಿಯ ಸಂಗತಿಯೊಂದನ್ನು ಹಂಚಿಕೊಂಡಿದೆ.
‘ಮರ್ಯಾದೆ ಪ್ರಶ್ನೆ’ ತಾರಾಬಳಗ ಪರಿಚಯಿಸಿದ ಪ್ರದೀಪ್, ನಾಗರಾಜ್ ಸೋಮಯಾಜಿ
ವಿಭಿನ್ನ ಶೀರ್ಷಿಕೆ ಮೂಲಕ ಗಮನ ಸೆಳೆಯುತ್ತಿರುವ ‘ಮರ್ಯಾದೆ ಪ್ರಶ್ನೆ’ ಸಿನಿಮಾದ ತಾರಾಬಳಗವನ್ನು ಪರಿಚಯ ಮಾಡಲಾಗಿದೆ. ಪ್ರತಿಭಾನ್ವಿತರ ದಂಡು ಚಿತ್ರದಲ್ಲಿದ್ದು, ಕಥೆ ಮತ್ತು ಆ ಪಾತ್ರಗಳಿಗೆ ನ್ಯಾಯ ಒದಗಿಸುವವರನ್ನು ಮರ್ಯಾದೆ ಪ್ರಶ್ನೆ ಅಖಾಡಕ್ಕೆ ಇಳಿಸಲಾಗಿದೆ. ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್ ಮುಖ್ಯ ತಾರಾಗಣದಲ್ಲಿದ್ದಾರೆ. ನಟರಾಗಿ ಅಥವಾ ಹೀರೋ ಆಗಿ ಕಾಣಿಸುವುದಕ್ಕಿಂತಲೂ ಪಾತ್ರಗಳಾಗಿ ಜೀವಿಸುವ ಪ್ರತಿಭಾನ್ವಿತರನ್ನು ಆಯ್ಕೆ ಮಾಡಲಾಗಿದೆ.
‘ಸಕ್ಕತ್ ಸ್ಟುಡಿಯೋ’ ಬ್ಯಾನರ್‌ನಡಿ ನಿರ್ಮಾಣ
‘ಸಕ್ಕತ್ ಸ್ಟುಡಿಯೋ’ ಬ್ಯಾನರ್‌ನಡಿ ಆರ್.ಜೆ ಪ್ರದೀಪ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರದೀಪ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಭಿನ್ನ ಮಾದರಿಯ ಕಂಟೆಂಟ್ ಮೂಲಕ ಪ್ರೇಕ್ಷಕರ ಗಮನಸೆಳೆಯುತ್ತಿರುವ ‘ಸಕ್ಕತ್ ಸ್ಟುಡಿಯೋ’ ನಮ್ಮ ಚಿತ್ರರಂಗದ ಸೆಲಿಬ್ರಿಟಿಸ್ ಅವರವರ ಜೀವನದ ‘ಮರ್ಯಾದೆ ಪ್ರಶ್ನೆ ’ ಬಗ್ಗೆ ಪೋಸ್ಟ್ ಮಾಡುವ ಮೂಲಕ ಶೀರ್ಷಿಕೆ ಬಿಡುಗಡೆ ಮಾಡಿದ್ದರು. ಈ ಚಿತ್ರಕ್ಕೆ ನಾಗರಾಜ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಅವರು ಈ ಮೊದಲು ಸಂಚಾರಿ ವಿಜಯ್ ನಟನೆಯ ‘ಪುಗ್ಸಟ್ಟೆ ಲೈಫು’ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಇದರ ಜೊತೆಗೆ ಅವರು ‘ಬೆಸ್ಟ್ ಆ್ಯಕ್ಟರ್’ ಹೆಸರಿನ ಮೈಕ್ರೋ ಮೂವಿ ಮಾಡಿದ ಅನುಭವ ಹೊಂದಿದ್ದಾರೆ. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ.