‘ಚೌಕಿದಾರ್’ಗೆ ಧನ್ಯ ರಾಮ್ ಕುಮಾರ್ ನಾಯಕಿ…

‘ಚೌಕಿದಾರ್’ಗೆ ಧನ್ಯ ರಾಮ್ ಕುಮಾರ್ ಎಂಟ್ರಿ…
ಪೃಥ್ವಿ ಅಂಬಾರ್ ಗೆ ಜೋಡಿಯಾದ ʼದೊಡ್ಮನೆ ಬ್ಯೂಟಿʼ
‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ‘ಚೌಕಿದಾರ್’ನ ಕೆಲಸಗಳು ಭರದಿಂದ ನಡೆಯುತ್ತಿದೆ . ಇತ್ತೀಚೆಗಷ್ಟೇ ನಟ ಡೈಲಾಗ್ ಕಿಂಗ್ ಸಾಯಿಕುಮಾರ್ ಈ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ‘ಚೌಕಿದಾರ್’ ಸಿನಿಮಾಗೆ ನಾಯಕಿ ಸಿಕ್ಕಿದ್ದಾಳೆ. ಹೌದು, ʼದೊಡ್ಮನೆ ಬ್ಯೂಟಿʼ ಧನ್ಯರಾಮ್ ಕುಮಾರ್ ʼಚೌಕಿದಾರ್ʼ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಸಿನಿಮಾದಲ್ಲಿ ನಾಯಕ ನಟ ಪೃಥ್ವಿ ಅಂಬಾರ್ ಗೆ ಜೋಡಿಯಾಗಿ ತೆರೆಮೇಲೆ ನಟಿಸುತ್ತಿದ್ದಾರೆ.
‘ಚೌಕಿದಾರ್’ಗೆ ಸಿಕ್ಕಳು ನಾಯಕಿ…
ಪೃಥ್ವಿ ಅಂಬಾರ್ ಗೆ ಧನ್ಯ ರಾಮ್ ಕುಮಾರ್ ಜೋಡಿ
ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸುತ್ತಿರುವ ‘ಚೌಕಿದಾರ್’ ಸಿನಿಮಾದಲ್ಲಿ ಧನ್ಯರಾಮ್ ಕುಮಾರ್ ಹೀರೋಯಿನ್ ಆಗಿ ಬಣ್ಣ ಹಚ್ಚುತ್ತಿರುವ ಸುದ್ದಿಯನ್ನು ಇದೀಗ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ‘ನಿನ್ನ ಸನಿಹಕೆ…’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟಿಯಾಗಿ ಪರಿಚಯಿತರಾಗಿದ್ದ ಧನ್ಯ ಇತ್ತೀಚೆಗಷ್ಟೇ ‘ದಿ ಜಡ್ಜಮೆಂಟ್’ ಸಿನಿಮಾದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಸದ್ಯ ಧನ್ಯ ನಾಯಕಿಯಾಗಿ ಅಭಿನಯಿಸಿರುವ ‘ಕಾಲಪತ್ತರ್’ ಸಿನಿಮಾ ರಿಲೀಸ್ ಗೆ ತಯಾರಾಗಿದ್ದು, ಈ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿರುವ ಈ ʼದೊಡ್ಮನೆ ಸುಂದರಿʼ ಈಗ ‘ಚೌಕಿದಾರ್’ ಬಳಗ ಸೇರಿಕೊಂಡಿದ್ದಾರೆ.
ಬಹುಭಾಷೆಯಲ್ಲಿ ಮೂಡಿ ಬರ್ತಿದೆ ‘ಚೌಕಿದಾರ್’
ಅಂದಹಾಗೆ, ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರ್ತಿದೆ. ಕನ್ನಡದ ಜೊತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈವರೆಗೆ ಸಿನಿಮಾದಲ್ಲಿ ಲವರ್ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ‘ಚೌಕಿದಾರ್’ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಹಲವು ಅಂಶಗಳು ಈ ಸಿನಿಮಾದಲ್ಲಿದೆ ಎಂಬುದು ಚಿತ್ರತಂಡದ ಮಾತು.
‘ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ಡಾ. ಕಲ್ಲಹಳ್ಳಿ ಚಂದ್ರಶೇಖರ್ ‘ಚೌಕಿದಾರ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಈಗಾಗಲೇ ʼಚೌಕಿದಾರ್ʼ ಸಿನಿಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೊಊರ್ಣಗೊಳಿಸಿರುವ ಚಿತ್ರತಂಡ ಇದೇ ಜುಲೈ ಮೂರನೇ ತಾರೀಖಿನಂದು ಬೆಂಗಳೂರಿನ ಬಂಡಿ ಮಹಾಕಾಳಿ ದೇಗುಲದಲ್ಲಿ ‘ಚೌಕಿದಾರ್’ ಸಿನಿಮಾ ಮುಹೂರ್ತ ನೆರವೇರಿಸಲು ಯೋಜನೆ ಹಾಕಿದೆ. ಚಿತ್ರತಂಡದ ಯೋಜನೆಯಂತೆ ಎಲ್ಲವೂ ನಡೆದರೆ, ಇದೇ ವರ್ಷಾಂತ್ಯಕ್ಕೆ ʼಚೌಕಿದಾರ್ʼ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.