ಸೆಪ್ಟೆಂಬರ್ 27 ರಂದು ‘ಮರ್ಫಿ’ ಬಿಡುಗಡೆ

ಯುವನಟ ಪ್ರಭು ಮುಂಡ್ಕೂರ್ ಅಭಿನಯದ ಹೊಸಚಿತ್ರ
ಕಾವ್ಯ, ಸಂಗೀತ ಹಾಗೂ ಭಾವನಾತ್ಮಕದ ಕಥಾಹಂದರದ ʼಚಿತ್ರʼಣ
ಯುವನಟ ಪ್ರಭು ಮುಂಡ್ಕೂರ್, ರೋಶನಿ ಪ್ರಕಾಶ್, ಇಳಾ ವೀರ್ಮಲ್ಲ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮರ್ಫಿ’ ಚಿತ್ರ ಇದೇ ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಿ.ಎಸ್.ಪಿ ವರ್ಮ ನಿರ್ದೇಶನದ ಎರಡನೇ ಕನ್ನಡ ಚಿತ್ರ ಇದಾಗಿದ್ದು, ಈ ಸಿನೆಮಾಕ್ಕೆ ಸಂಗೀತವನ್ನು ಅರ್ಜುನ ಜನ್ಯ, ಸಿಲ್ವೆಸ್ಟರ್ ಪ್ರದೀಪ್ ಹಾಗೂ ರಜತ್-ಕೀರ್ತನ್ ರವರು ಸಂಯೋಜಿಸಿದ್ದಾರೆ. ಆದರ್ಶ ಆರ್. ಛಾಯಾಗ್ರಹಣವಿರುವ ಈ ಸಿನೆಮಾಕ್ಕೆ ಬಿ.ಎಸ್.ಪಿ ವರ್ಮ ರವರೊಡನೆ ಪ್ರಭು ಮುಂಡ್ಕೂರ್ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ.
ನುರಿತ ಕಲಾವಿದರು, ತಂತ್ರಜ್ಞರ ಸಮಾಗಮ
ಇನ್ನು ಪ್ರಭು ಮುಂಡ್ಕೂರ್, ರೋಶನಿ ಪ್ರಕಾಶ್, ಇಳಾ ವೀರ್ಮಲ್ಲ ಅವರೊಂದಿಗೆ ಹೆಚ್. ಜಿ. ದತ್ತಾತ್ರೇಯ (ದತ್ತಣ್ಣ), ಅಶ್ವಿನ್ ರಾವ್ ಪಲ್ಲಕ್ಕಿ, ಮಹಾಂತೇಶ ಹಿರೇಮಠ, ರಾಮಪ್ರಸಾದ್ ಬಾಣಾವರ ಮತ್ತಿತರರು ಈ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ನಾಲ್ಕು ವರ್ಷಗಳ ಕನಸು ಇದೀಗ ನನಸು..!
ಸುಮಾರು ನಾಲ್ಕು ವರ್ಷಗಳ ಪರಿಶ್ರಮದಿಂದ ತಯಾರಾಗಿರುವ ‘ಮರ್ಫಿ’ ಚಿತ್ರಕ್ಕೆ (‘ಕಾಂತಾರ’, ‘ಸಲಾರ್’ ಹಾಗೂ ‘ಸಪ್ತ ಸಾಗರದಾಚೆಯೆಲ್ಲೋ’) ಖ್ಯಾತಿಯ ಎಂ. ಆರ್. ರಾಜಕೃಷ್ಣನ್ ರವರ ಆಡಿಯೋಗ್ರಫಿ ಹಾಗೂ ಶ್ರೀಜಿತ್ ಸಾರಂಗ್ ರವರ ಡಿ.ಐ, ಕಾರ್ಯ ನಿರ್ವಹಿಸಿದ್ದಾರೆ. ”ಮರ್ಫಿ’ ಸಿನೆಮಾದ ಪ್ರಿ-ಪ್ರೊಡಕ್ಷನ್, ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸುಮಾರು ನಾಲ್ಕು ವರ್ಷಗಳ ಸಮಯ ತೆಗೆದುಕೊಂಡಿದೆ. ಕೊನೆಗೂ ತಮ್ಮ ಕನಸಿನಂತೆಯೇ ‘ಮರ್ಫಿ’ ಸಿನೆಮಾ ಮೂಡಿಬಂದಿದ್ದು, ನಮ್ಮ ಕನಸು ನನಸಾಗುವ ಹೊತ್ತು ಬಂದಿದೆ. ನಮ್ಮ ಸಿನೆಮಾದ ತಾಂತ್ರಿಕ ಕಾರ್ಯಗಳು ಚಿತ್ರದ ನಕ್ಷೆಯನ್ನು ಉನ್ನತ ರೀತಿಯಲ್ಲಿ ಬದಲಿಸಿದೆʼ ಎಂಬುದು ಚಿತ್ರತಂಡದ ಮಾತು.
‘ಮರ್ಫಿ’ ಬಿಡುಗಡೆಗೆ ಮುಹೂರ್ತ ಫಿಕ್ಸ್
ಈಗಾಗಲೇ ‘ಮರ್ಫಿ’ ಚಿತ್ರದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ನಿಧಾನವಾಗಿ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ”ಮರ್ಫಿ’ ಚಲನಚಿತ್ರವು ಇದೇ 2024ರ ಸೆಪ್ಟೆಂಬರ್ 27 ರಂದು ಕರ್ನಾಟಕಾದ್ಯಂತ ಬಿಡುಗಡೆಯಾಗಲಿದ್ದು ಎಲ್ಲರಿಗೂ ಕಥೆ, ಕಾವ್ಯ, ಸಂಗೀತ, ನಟನೆ, ಹಾಗೂ ಭಾವನಾತ್ಮಕದ ರಸದೌತಣ ನೀಡಲಿದೆʼ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.