ಚಿಯಾನ್ ವಿಕ್ರಮ್ ‘ತಂಗಲಾನ್’ ಟ್ರೇಲರ್ ರಿಲೀಸ್

ಫ್ಯಾನ್ಸ್ ಗಮನ ಸೆಳೆದ ಬಹು ನಿರೀಕ್ಷಿತ ‘ತಂಗಲಾನ್’ ಟ್ರೇಲರ್
ಚಿಯಾನ್ ವಿಕ್ರಮ್ ವೃತ್ತಿ ಬದುಕಿನ ಬಹು ನಿರೀಕ್ಷಿತ ಸಿನೆಮಾ ‘ತಂಗಲಾನ್’ ಟ್ರೇಲರ್ ರಿಲೀಸ್ ಆಗಿದೆ. ಬಹಳ ಸಮಯದಿಂದ ಸಿನೆಮಾ ನೋಡಲು ಕಾಯುತ್ತಿದ್ದ ವಿಕ್ರಮ್ ಫ್ಯಾನ್ಸ್ ಗಳಿಗೆ ಚಿತ್ರದ ಟ್ರೇಲರ್ ಕುತೂಹಲದಿಂದ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ʼಕೆಜಿಎಫ್ʼ ಅಖಾಡದಲ್ಲಿದ್ದ ಪೂರ್ವಜರ ಕಥೆ ಇದು ಎನ್ನಲಾಗುತ್ತಿದ್ದು, ಬ್ರಿಟೀಷ್ ಅಧಿಕಾರಿಯೊಬ್ಬ ಸ್ಥಳೀಯ ಬುಡಕಟ್ಟು ಜನಾಂಗದೊಂದಿಗೆ ʼಕೆಜಿಎಫ್ʼ ಚಿನ್ನವನ್ನು ಹುಡುಕುವ ದೃಶ್ಯವನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ಮಾಸ್ ಲುಕ್‌ನಲ್ಲಿ ಚಿಯಾನ್ ವಿಕ್ರಮ್ ಎಂಟ್ರಿ...
ಚಿನ್ನ ಹುಡುಕುವ ವೇಳೆ ಎದುರಾಗುವ ಸವಾಲು, ಸಂಕಷ್ಟಗಳನ್ನು ರೋಚಕವಾಗಿ ಟ್ರೇಲರ್ ನಲ್ಲಿ ತೋರಿಸಲಾಗಿದೆ. ಚಿಯಾನ್ ವಿಕ್ರಮ್ ಗುಂಪಿನ ನಾಯಕನಂತೆ ಇಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯ ನೈಜವಾಗಿ ಮೂಡಿ ಬಂದಿದೆ. ಈ ಪ್ಯಾನ್ ಇಂಡಿಯಾ ಸಿನೆಮಾವನ್ನು ಖ್ಯಾತ ನಿರ್ದೇಶಕ ಪಾ ರಂಜಿತ್ ನಿರ್ದೇಶನ ಮಾಡಿದ್ದು, ವಿಕ್ರಮ್ ಜೊತೆ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್, ಪಶುಪತಿ ಮತ್ತು ಇತರರು ನಟಿಸಿದ್ದಾರೆ.
ಸದ್ಯದ ಮಟ್ಟಿಗೆ ‘ತಂಗಲಾನ್’ ಬಿಡುಗಡೆ ಬಗ್ಗೆ ಸ್ಪಷ್ಟತೆಯಿಲ್ಲ..!
ಇನ್ನು ಬಿಡುಗಡೆಯಾಗಿರುವ ‘ತಂಗಲಾನ್’ ಟ್ರೇಲರ್ ನೋಡಿ ಚಿಯಾನ್ ವಿಕ್ರಮ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಮೂಲಗಳ ಪ್ರಕಾರ ಇದೇ ಆಗಸ್ಟ್ 15ಕ್ಕೆ ‘ತಂಗಲಾನ್’ ಚಿತ್ರ ರಿಲೀಸ್ ಆಗಲಿದೆ ಎನ್ನಲಾಗಿದೆ. ಆದರೆ ಈ ವಿಷಯವನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಖಚಿತಪಡಿಸದಿರುವ ಕಾರಣ ಸಿನೆಮಾದ ರಿಲೀಸ್ ಡೇಟ್ ಬಗ್ಗೆ ಸ್ಪಷ್ಟತೆಯಿಲ್ಲ. ಇದು ಸಹಜವಾಗಿಯೇ ವಿಕ್ರಮ್ ಅಭಿಮಾನಿಗಳ ನಿರಾಸೆಗೂ ಕಾರಣವಾಗಿದೆ.