ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ʼಕೆಂಡʼ ಜು. 26ರಂದು ಚಿತ್ರಮಂದಿರಕ್ಕೆ…
ಸಿನಿಪ್ರಿಯರ ಗಮನ ಸೆಳೆದ ಸಹದೇವ್ ಕೆಲವಡಿ ನಿರ್ದೇಶನದ ʼಕೆಂಡʼ

ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಸಿನಿ ಪ್ರಿಯರು ಮತ್ತು ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿರುವ ʼಕೆಂಡʼ ಸಿನೆಮಾ ಇದೇ ಜುಲೈ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ʼಕೆಂಡʼ ಸಿನೆಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಸಿನೆಮಾದ ಟ್ರೇಲರ್ ಬಿಡುಗಡೆಗೊಳಿಸದೆ. ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್, ʼಕೆಂಡʼ ಸಿನೆಮಾದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ʼಕೆಂಡʼ ಟ್ರೇಲರ್ ಹೇಗಿದೆ..?
ಸೂಕ್ಷ್ಮ ಮನಃಸ್ಥಿತಿಯ ನಿರ್ದೇಶಕನ ಕೈಗೆ ಭೂಗತ ಜಗತ್ತಿನ ಕಥೆ ಸಿಕ್ಕರೆ, ಅಲ್ಲಿ ಬೇರೊಂದು ಆಯಾಮದ ದೃಶ್ಯಕಾವ್ಯ ರೂಪುಗೊಳ್ಳುತ್ತದೆ. ʼಕೆಂಡʼದಲ್ಲಿರೋದೂ ಕೂಡಾ ಅಂಥಾದ್ದೇ ರೌಡಿಸಂ ಸುತ್ತ ಜರುಗುವ ಕಥನ. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡೋ ಯುವಕನೋರ್ವ, ಪರಿಸ್ಥಿತಿಗಳ ಸೆಳವಿಗೆ ಸಿಕ್ಕು ಭೂಗತದ ತೆಕ್ಕೆಗೆ ಬೀಳುವ ಕಥೆ ಸುತ್ತ ಸಿನೆಮಾ ಸಾಗುವ ಸುಳಿವನ್ನು ಟ್ರೇಲರಿನಲ್ಲಿ ಬಿಟ್ಟುಕೊಡಲಾಗಿದೆ.
ʼಕೆಂಡʼ ಟ್ರೇಲರ್ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ : https://www.youtube.com/watch?v=Mn9CZUxELkA&t=15s
ಸದಭಿರುಚಿ ತಂಡದ ಹೊಸ ಪ್ರಯತ್ನ…
ʼಅಮೇಯುಕ್ತಿ ಸ್ಟುಡಿಯೋಸ್ʼ ಬ್ಯಾನರಿನಡಿಯಲ್ಲಿ ರೂಪಾ ರಾವ್ ಈ ಸಿನೆಮಾವನ್ನು ನಿರ್ಮಾಣ ಮಾಡಿದ್ದಾರೆ. ಸಹದೇವ್ ಕೆಲವಡಿ ಈ ಸಿನೆಮಾವನ್ನು ನಿರ್ದೇಶಿಸಿದ್ದಾರೆ.

ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ, ರೇಖಾ ಕೂಡ್ಲಿಗಿ, ಪ್ರಭಾಕರ್ ಜೋಶಿ ಮುಂತಾದವರ ತಾರಾಗಣವಿದೆ. ಒಟ್ಟಾರೆ ಸಾಕಷ್ಟು ಕುತೂಹಲ ಮೂಡಿಸಲು ಯಶಸ್ವಿಯಾಗಿರುವ ʼಕೆಂಡʼ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ಇದೇ ಜುಲೈ ಅಂತ್ಯಕ್ಕೆ ಗೊತ್ತಾಗಲಿದೆ.