62ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವಣ್ಣ… ಕೈಯಲ್ಲಿ ಡಜನ್‌ಗೂ ಹೆಚ್ಚು ಚಿತ್ರಗಳು!

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ 62ನೇ ಹುಟ್ಟುಹಬ್ಬ
ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಸಂಭ್ರಮದಿಂದ ಶಿವಣ್ಣ ದೂರ
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜಕುಮಾರ್ ಅವರಿಗೆ ಇಂದು (12 ಜುಲೈ 2024) ಹುಟ್ಟುಹಬ್ಬದ ಸಂಭ್ರಮ. ನಟ ಶಿವರಾಜಕುಮಾರ್ ಅವರು 62ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬ ವರ್ಗದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಮೊದಲೆಲ್ಲ ಶಿವರಾಜಕುಮಾರ್ ತಮ್ಮ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ, ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಕೋವಿಡ್ ಲಾಕ್‌ಡೌನ್ ಬಳಿಕ ನಟ ಶಿವರಾಜಕುಮಾರ್ ತಮ್ಮ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ಬ್ರೇಕ್ ಹಾಕಿದ್ದರು. ಅದಾದ ನಂತರ ತಮ್ಮ ಸೋದರ ಪುನೀತ್ ರಾಜಕುಮಾರ್ ಅಗಲಿಕೆಯ ಬಳಿಕವಂತೂ, ಶಿವಣ್ಣ ಇಂಥ ಅದ್ಧೂರಿ ಸಂಭ್ರಮ ಮತ್ತು ಆಚರಣೆಗಳಿಂದ ಸಂಪೂರ್ಣ ದೂರವೇ ಉಳಿದರು.
ಕಳೆದ ಐದಾರು ವರ್ಷಗಳಿಂದ ಹುಟ್ಟುಹಬ್ಬದ ಸಮಯದಲ್ಲಿ ಶಿವರಾಜಕುಮಾರ್ ತಮ್ಮ ಕುಟುಂಬದ ಸದಸ್ಯರ ಜೊತೆ ಮನೆಯಿಂದ ಹೊರಗಿರುವುದರಿಂದ ಅಭಿಮಾನಿಗಳ ಕೈಗೂ ಶಿವಣ್ಣ ಸಿಗುತ್ತಿಲ್ಲ. ಕಳೆದ ವರ್ಷದಂತೆ, ಈ ಬಾರಿ ಕೂಡ ಶಿವರಾಜಕುಮಾರ್ ಹುಟ್ಟುಹಬ್ಬದ ದಿನದಂದು ಮನೆಯಿಂದ ಹೊರಗಿದ್ದಾರೆ. ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ತಮ್ಮ ಸೋಶಿಯಾಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದ ಶಿವಣ್ಣ ಈ ಬಾರಿಯೂ ಹುಟ್ಟುಹಬ್ಬದ ದಿನದಂದು ಮನೆಯಿಂದ ಹೊರಗಿರುವ ಕಾರಣ, ಅಭಿಮಾನಿಗಳು ಯಾರೂ ಕೂಡ ಮನೆ ಬಳ ಬಂದು ತಮಗಾಗಿ ಕಾಯದಂತೆ ಮನವಿ ಮಾಡಿಕೊಂಡಿದ್ದರು.
ಅಂದಿನಿಂದ ಇಂದಿನವರೆಗೂ ಡಿಮ್ಯಾಂಡ್ ಉಳಿಸಿಕೊಂಡಿರುವ ಶಿವಣ್ಣ
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಯಾವುದೇ ಹೀರೋ ಅಥವಾ ಹೀರೋಯಿನ್‌ಗಳಿಗೆ ಒಂದು ಸಿನೆಮಾ ಆದ ನಂತರ, “ಮುಂದಿನ ಸಿನೆಮಾ ಯಾವುದು?ʼ ಎಂಬ ಯೋಚನೆ ಬರುವುದು ಸರ್ವೇ ಸಾಮಾನ್ಯ. ಆದರೆ ನಟ ಶಿವರಾಜಕುಮಾರ್‌ಗೆ ಮಾತ್ರ ಇಂಥದ್ದೊಂದು ಯೋಚನೆ ಬಂದಿರುವುದಕ್ಕೆ ಖಂಡಿತಾ ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಶಿವರಾಜಕುಮಾರ್ ಒಪ್ಪಿಕೊಳ್ಳುತ್ತಿರುವ, ಅವರನ್ನು ಹುಡುಕಿಕೊಂಡು ಬರುತ್ತಿರುವ ಮತ್ತು ಅವರ ಕೈಯಲ್ಲಿರುವ ಸಿನೆಮಾಗಳು! ಹೌದು ʼಆನಂದ್ʼ ಸಿನಿಮಾದಿಂದ ಇಲ್ಲಿಯವರೆಗೆ ಶಿವರಾಜಕುಮಾರ್ ಸುಮಾರು 127ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೆ ಅದೇ ಬೇಡಿಕೆ ಉಳಿಸಿಕೊಂಡ ಕೆಲವೇ ಕೆಲವು ನಾಯಕ ನಟರಲ್ಲಿ ಶಿವರಾಜಕುಮಾರ್ ಅವರದ್ದು ಮೊದಲ ಹೆಸರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಶಿವಣ್ಣ ಕೈಯಲ್ಲಿ ಡಜನ್‌ಗೂ ಹೆಚ್ಚು ಸಿನಿಮಾಗಳು!
ಶಿವರಾಜಕುಮಾರ್ ಆಪ್ತರು ಮತ್ತು ಚಿತ್ರರಂಗದ ಮೂಲಗಳ ಪ್ರಕಾರ ಈಗಾಗಲೇ ಶಿವರಾಜಕುಮಾರ್ ಕೈಯಲ್ಲಿರುವ ಸಿನೆಮಾಗಳ ಸಂಖ್ಯೆ ಬರೋಬ್ಬರಿ 12ಕ್ಕೂ ಹೆಚ್ಚು! ಒಂದು ಡಜನ್‌ಗೂ ಹೆಚ್ಚು ಸಿನೆಮಾಗಳ ಪೈಕಿ ʼ45ʼ, ʼಭೈರತಿ ರಣಗಲ್ʼ, ʼಉತ್ತರಕಾಂಡʼ, ʼಭೈರವನ ಕೊನೆ ಪಾಠʼ, ʼಶಿವಗಣʼ ಹೀಗೆ ಒಂದಷ್ಟು ಸಿನೆಮಾಗಳು ಈಗಾಗಲೇ ಪ್ರೊಡಕ್ಷನ್ ಮಾತ್ತು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದರೆ, ʼದಳವಾಯಿʼ, ʼಎಸ್‌ಆರ್‌ಕೆʼ ಸೇರಿದಂತೆ ಇನ್ನು ಹೆಸರಿಡದ ಐದಾರು ಸಿನೆಮಾಗಳು ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸೆಟ್ಟೇರುವ ಸಾಧ್ಯತೆಯಿದೆ.
ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಗಣ್ಯರಿಂದ ಶಿವಣ್ಣನಿಗೆ ಬರ್ತ್‌ಡೇ ಶುಭ ಹಾರೈಕೆ
ನಟ ಶಿವರಾಜಕುಮಾರ್ ಅವರು 62ನೇ ವಸಂತಕ್ಕೆ ಕಾಲಿಡುತ್ತಿರುವ, ಸಂದರ್ಭದಲ್ಲಿ ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬ ವರ್ಗದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರರಂಗದ ಅನೇಕ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರು ಶಿವರಾಜಕುಮಾರ್ ಅವರಿಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಜನ್ಮದಿನದ ಶುಭಾಶಯಾ ಕೋರಿದ್ದಾರೆ. ಚಿತ್ರರಂಗದ ಜೊತೆಗೆ ರಾಜಕೀಯ, ಕ್ರೀಡೆ ಮತ್ತು ಸಾಮಾಜಿಕ ಕ್ಷೇತ್ರದ ವಿವಿಧ ಗಣ್ಯರು ಕೂಡ ಶಿವರಾಜಕುಮಾರ್ ಅವರ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ. ಜೊತೆಗೆ ಶಿವರಾಜಕುಮಾರ್ ಅವರ ಬರ್ತ್ ಡೇ ಪ್ರಯುಕ್ತ ಅವರ ಅಭಿನಯದ ಮುಂಬರುವ ಅನೇಕ ಹೊಸ ಸಿನಿಮಾಗಳ ಫಸ್ಟ್‌ಲುಕ್, ಟೀಸರ್, ಟೈಟಲ್‌ಗಳು ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಿದೆ.