ಮಲಯಾಳಂನತ್ತ ‘ಕೆ.ಆರ್.ಜಿ.ಸ್ಟೂಡಿಯೋಸ್’; ಚೊಚ್ಚಲ ಚಿತ್ರ ‘ಪಡಕ್ಕಳಂ’ ಗೆ ಚಾಲನೆ

ಮಲೆಯಾಳಂನಲ್ಲಿ ‘ಕೆ.ಆರ್.ಜಿ.ಸ್ಟೂಡಿಯೋಸ್’ ಹೊಸ ಆಟ ಆರಂಭ!
ಚೊಚ್ಚಲ ಮಲಯಾಳಂ ಚಿತ್ರ ‘ಪಡಕ್ಕಳಂ’ಕ್ಕೆ ಮುಹೂರ್ತ
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಿನೆಮಾಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ಗುರುತಿಸಿಕೊಂಡಿರುವ ‘ಕೆ.ಆರ್.ಜಿ. ಸ್ಟೂಡಿಯೋಸ್’ ಇದೀಗ ಮಲೆಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದೆ. ಅಂದಹಾಗೆ, ‘ಕೆ.ಆರ್.ಜಿ. ಸ್ಟೂಡಿಯೋಸ್’ ಸಂಸ್ಥೆ ‘ಫ್ರೈಡೇ ಫಿಲಂ ಹೌಸ್’ ನ ಪ್ರಥಮ ಸಹಯೋಗದಲ್ಲಿ ಮೊದಲ ಮಲೆಯಾಳಂ ಸಿನೆಮಾದ ನಿರ್ಮಾಣಕ್ಕೆ ಕೈ ಹಾಕಿದ್ದು, ಈ ಸಿನೆಮಾಕ್ಕೆ ‘ಪಡಕ್ಕಳಂ’ ಎಂದು ಹೆಸರಿಡಲಾಗಿದೆ. ಈಗಾಗಲೇ ಸದ್ದಿಲ್ಲದೆ ‘ಪಡಕ್ಕಳಂ’ ಸಿನೆಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಈ ಸಿನೆಮಾದ ಮುಹೂರ್ತ ಕೂಡ ನೆರವೇರಿದೆ. ಕೇರಳದ ಕೊಚ್ಚಿಯಲ್ಲಿ ‘ಪಡಕ್ಕಳಂ’ ಸಿನೆಮಾದ ಮುಹೂರ್ತ ಸಮಾರಂಭ ನೆರವೇರಿದ್ದು, ಇದೇ ವೇಳೆ ಚಿತ್ರತಂಡ ‘ಪಡಕ್ಕಳಂ’ ಸಿನೆಮಾದ ಒಂದು ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಏನಿದು ‘ಪಡಕ್ಕಳಂ’..?
‘ಕೆ.ಆರ್.ಜಿ.ಸ್ಟೂಡಿಯೋಸ್’ ಬ್ಯಾನರ್ ಹಾಗೂ ‘ಫ್ರೈಡೇ ಫಿಲಂ ಹೌಸ್’ ನ ಪ್ರಥಮ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಮಲಯಾಳಂ ಚಿತ್ರ ‘ಪಡಕ್ಕಳಂ’ ಹಾಸ್ಯಭರಿತ ಫ್ಯಾಂಟಸಿಯ ಚಿತ್ರವಾಗಿದೆ ಎಂಬುದು ಚಿತ್ರತಂಡ ನೀಡಿರುವ ಮಾಹಿತಿ. ಚಿತ್ರವನ್ನು ಮನು ಸ್ವರಾಜ್ ನಿರ್ದೇಶಿಸುತ್ತಾರೆ. ಈ ಚಿತ್ರ ಅವರ ಮೊದಲ ಪ್ರಯತ್ನವಾಗಿದ್ದು, ಇದನ್ನು ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ‘ಕೆ.ಆರ್.ಜಿ.ಸ್ಟೂಡಿಯೋಸ್’ ಬ್ಯಾನರ್ ಅಡಿಯಲ್ಲಿ ಹಾಗೂ ಖ್ಯಾತ ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ‘ಫ್ರೈಡೇ ಫಿಲಂ ಹೌಸ್’ ಬ್ಯಾನರ್ ಅಡಿಯಲ್ಲಿ ಈ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ‘ಪಡಕ್ಕಳಂ’ ಸಿನೆಮಾದ ಮುಹೂರ್ತ ಸಮಾರಂಭ ನೆರವೇರಿದ್ದು, ಇದೇ ಜುಲೈ ಅಂತ್ಯದಿಂದ ಈ ಸಿನೆಮಾದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಕೊನೆಗೆ ‘ಪಡಕ್ಕಳಂ’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.