Street Beat

ಸೆಟ್ಟೇರಿತು ಮಹೇಶ್ ಬಾಬು, ಸ್ಮೈಲ್ ಗುರು ರಕ್ಷಿತ್ ಹೊಸ ಸಿನಿಮಾ

‘ಆಕಾಶ್’, ‘ಅರಸು’, ‘ಮೆರವಣಿಗೆ’ ಡೈರೆಕ್ಟರ್ ಹೊಸ ಸಿನಿಮಾಕ್ಕೆ ಮುಹೂರ್ತ..

ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಸಾಥ್

ಕನ್ನಡ ಚಿತ್ರರಂಗದಲ್ಲಿ ‘ಅರಸು’, ‘ಆಕಾಶ್’, ‘ಮೆರವಣಿಗೆ’ ಮೊದಲಾದ ಸೂಪರ್‌ ಹಿಟ್‌ ಸಿನೆಮಾಗಳನ್ನು ನೀಡಿರುವ ನಿರ್ದೇಶಕ ಮಹೇಶ್‌ ಬಾಬು ಸದ್ದಿಲ್ಲದೆ ಹೊಸ ಸಿನೆಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಈ ಸಿನೆಮಾದ ಮುಹೂರ್ತ ಇತ್ತೀಚೆಗೆ ನೆರವೇರಿತು. ಇನ್ನೂ ಹೆಸರಿಡದ ಈ ಸಿನೆಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಅಭಯ ಹಸ್ತ ಬಲಮುರಿ ದೇಗುಲದಲ್ಲಿ ನಡೆಯಿತು.

ನಟ ‘ನೆನಪಿರಲಿ’ ಪ್ರೇಮ್ ಈ ಸಿನೆಮಾದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ಸಿನೆಮಾದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಮತ್ತೊಬ್ಬ ಮುಖ್ಯ ಅತಿಥಿ ‘ಎ ಕ್ಲಾಸ್ ಸಿನಿ ಫಿಲ್ಮ್ಸ್ ಪ್ರೊಡಕ್ಷನ್’ ಸಂಸ್ಥಾಪಕ ಅನುರಾಗ್ ಆರ್. ತಾಯಿ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ವೇಳೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಸೇರಿದಂತೆ ಚಿತ್ರರಂಗದ ಅನೇಕರು ಹಾಜರಿದ್ದರು. ಸಿನೆಮಾದ ಮುಹೂರ್ತದ ಬಳಿಕ ಮಾತನಾಡಿದ ಚಿತ್ರತಂಡ, ಸಿನೆಮಾಕ್ಕೆ ಸಂಬಂಧಿಸಿದ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು.

ಹೊಸ ಸಿನಿಮಾದ ಮೂಲಕ ಸ್ಮೈಲ್ ಗುರು ರಕ್ಷಿತ್ ಇಂಡಸ್ಟ್ರೀಗೆ ಪರಿಚಯಿಸ್ತಿದ್ದಾರೆ ಮಹೇಶ್ ಬಾಬು

ಪ್ರತಿ ಸಿನಿಮಾದಲ್ಲಿಯೂ ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ನಿರ್ದೇಶಕ ಮಹೇಶ್ ಬಾಬು ಅವರೀಗ, ಈ ಚಿತ್ರದ ಮೂಲಕ ಕಿರುತೆರೆಯ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಸ್ಮೈಲ್ ಗುರು ರಕ್ಷಿತ್ ಅವರನ್ನು ನಾಯಕನಾಗಿ ಕನ್ನಡ ಬೆಳ್ಳಿಪರದೆಗೆ ಕರೆದುಕೊಂಡು ಬರುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾ ಕೊಡಬೇಕೆಂಬ ಉದ್ದೇಶದಿಂದ ‘ಎಂಎಂಎಂ ಪಿಕ್ಚರ್ಸ್’ ಹಾಗೂ ‘ಎ ಕ್ಲಾಸ್ ಸಿನಿ ಫಿಲ್ಮಂಸ್’ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್. ಹಾಗೂ ಮಿಥುನ್ ಕೆ. ಎಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದು, ಸತ್ಯ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ. ಈ ಸಿನೆಮಾಕ್ಕೆ ಸ್ವತಃ ನಾಯಕ ಸ್ಮೈಲ್ ಗುರು ರಕ್ಷಿತ್ ಅವರೇ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ.

ಶೀಘ್ರದಲ್ಲಿಯೇ ಟೈಟಲ್‌ ಅನೌನ್ಸ್‌!

ಮಹೇಶ್ ಬಾಬು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಇದನ್ನು ‘ಪ್ರೊಡಕ್ಷನ್ ನಂ 2’ ಎಂದು ಕರೆಯಲಾಗುತ್ತಿದೆ. ಶೀಘ್ರದಲ್ಲಿಯೇ ಚಿತ್ರತಂಡ ಅದ್ಧೂರಿಯಾಗಿ ಟೈಟಲ್ ರಿವೀಲ್ ಮಾಡುವ ಯೋಜನೆ ಹಾಕಿಕೊಂಡಿದೆ. ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮುಗಿಸಲಿರುವ ಚಿತ್ರತಂಡ ಎರಡನೇ ಹಂತದ ಶೂಟಿಂಗ್ ಗಾಗಿ ಮಲೆನಾಡಿನತ್ತ ಹೆಜ್ಜೆ ಹಾಕಲಿದೆ.

ಸ್ಮೈಲ್ ಗುರು ರಕ್ಷಿತ್ ಗೆ ಜೆರುಶಾ ನಾಯಕಿ

ಅಂದಹಾಗೆ, ಈ ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ‘ವೀರ ಮದಕರಿ’ಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ಅವರು ಅಭಿನಯಿಸುತ್ತಿದ್ದಾರೆ. ಸಿನೆಮಾದಲ್ಲಿ ಇಬ್ಬರು ನಾಯಕಿರು ಇರಲಿದ್ದು, ಸದ್ಯಕ್ಕೆ ಜೆರುಶಾ ಮೊದಲ ನಾಯಕಿಯಾಗಿ ಆಯ್ಕೆಯಾಗಿದ್ದು, ಮತ್ತೊಬ್ಬ ನಾಯಕಿಯನ್ನು ಶೀಘ್ರದಲ್ಲಿಯೇ ರಿವೀಲ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

Related Posts

error: Content is protected !!