Video

‘ಸಿ’… ಎಂಬ ಮನಮುಟ್ಟುವ ‘ಸಿ’ನೆಮಾ ಟೀಸರ್‌!

ವಿಭಿನ್ನ ಕಥಾಹಂದರದ ‘ಸಿ’ ಟೀಸರ್‌ ಬಿಡುಗಡೆ

ಟೀಸರಿನಲ್ಲಿ ಸಿನಿಪ್ರಿಯರ ಸೆಳೆದ ಹೊಸಬರ ಸಿನೆಮಾ

ಈಗಾಗಲೇ ತನ್ನ ಟೈಟಲ್‌ ಮತ್ತು ಹಾಡುಗಳ ಮೂಲಕ ಚಂದನವನದಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ, ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಸಿʼ ಸಿನೆಮಾ ತೆರೆಗೆ ಬರಲು ತಯಾರಾಗಿದೆ. ಸದ್ಯ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ‘ಸಿʼ ಸಿನೆಮಾದ ಟೀಸರ್‌ ಇದೀಗ ಬಿಡುಗಡೆಯಾಗಿದೆ. ಆರಂಭದಿಂದಲೇ ಚಿತ್ರತಂಡ ಹೇಳಿಕೊಂಡು ಬಂದಿರುವಂತೆ,  ‘ಸಿʼ ಸಿನೆಮಾ ತಂದೆ-ಮಗಳ ಬಾಂಧವ್ಯದ ಕಥೆಯನ್ನು ಮತ್ತು ಜೊತೆಗೆ ಒಂದಷ್ಟು ಥ್ರಿಲ್ಲರ್‌ ಎಲಿಮೆಂಟ್ಸ್‌ ಇಟ್ಟುಕೊಂಡು ತೆರೆಗೆ ಬರುತ್ತಿರುವ ಸಿನೆಮಾ. ಅದರಂತೆ, ‘ಸಿʼ ಸಿನೆಮಾ ಸಣ್ಣ ಎಳೆಯನ್ನು ಟೀಸರ್‌ ನಲ್ಲಿ ಕುತೂಹಲ ಭರಿತವಾಗಿ ಮತ್ತು ಮನಮುಟ್ಟುವಂತೆ ತೆರೆದಿಡಲಾಗಿದೆ.

ʼಸಿʼ ಸಿನೆಮಾದ ಟೀಸರ್‌ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಮನಮುಟ್ಟುವ ಕಥೆಗೆ ದೃಶ್ಯರೂಪ…

ನಮ್ಮ ನಡುವೆಯೇ ನಡೆಯುವ ಅಪರೂಪದ ತಂದೆ-ಮಗಳ ಬಾಂಧವ್ಯದ ಕಥೆಯನ್ನು ‘ಸಿʼ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ  ನಿರ್ದೇಶಕ ಕಂ ನಾಯಕ ನಟ ಕಿರಣ್‌ ಸುಬ್ರಮಣಿ. ‘ಸಿʼ ಸಿನೆಮಾದಲ್ಲಿ ತೆರೆಮೇಲೆ ಕಿರಣ್‌ ಸುಬ್ರಮಣಿ ಅವರೊಂದಿಗೆ ಸಾತ್ವಿಕಾ, ಮಜಾಭಾರತ ಪಾಟೀಲ್‌, ಶ್ರೀಧರ್‌ ರಾಮ್‌, ಆರ್ಯ, ಚೈತ್ರಾ, ಪ್ರಶಾಂತ್‌ ನಟನ, ಮಧುಮಿತ, ನಿರ್ಮಲ ನಾಧನ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಎಜಿಎಸ್‌ ಕ್ರಿಯೇಶನ್ಸ್‌ʼ ಬ್ಯಾನರಿನಲ್ಲಿ ಎ. ಜಿ. ಸುಬ್ರಮಣಿ ನಿರ್ಮಿಸಿರುವ ‘ಸಿʼ ಸಿನೆಮಾಕ್ಕೆ ಎ. ಬಿ. ಮುರಳೀಧರನ್‌ ಸಂಗೀತ ಸಂಯೋಜಿಸಿದ್ದಾರೆ. ಅನುರಾಧಾ ಭಟ್‌, ವಾಸುಕಿ ವೈಭವ್‌, ವ್ಯಾಸರಾಜ್‌ ಸೋಸಲೆ, ಶಶಾಂಕ್‌ ಶೇಷಗಿರಿ, ಸುರಭಿ ಮೊದಲಾದ ಗಾಯಕರು ‘ಸಿʼ ಸಿನೆಮಾದ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಆಗಸ್ಟ್‌ 23 ‘ಸಿʼನೆಮಾ ಥಿಯೇಟರಿನಲ್ಲಿ!

ಅಂದಹಾಗೆ, ಕಳೆದ ಕೆಲ ದಿನಗಳಿಂದ ಭರ್ಜರಿಯಾಗಿ ‘ಸಿʼ ಸಿನೆಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಆಗಸ್ಟ್‌ 23ಕ್ಕೆ ‘ಸಿʼ ಸಿನೆಮಾವನ್ನು ಸಿನೆಮಾ ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ‘ಸಿʼ ಸಿನೆಮಾದ ಟೀಸರಿಗೆ ಸಾಮಾಜಿಕ ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನೆಮಾ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.

 

Related Posts

error: Content is protected !!