ತರುಣ್, ಸೋನಾಲ್ ಮದುವೆ ಸುದ್ದಿ ಈಗ ಅಧಿಕೃತ

ತಮ್ಮ ವಿವಾಹ ಖಚಿತಪಡಿಸಿದ ನಿರ್ದೇಶಕ ತರುಣ್ ಹಾಗೂ ನಟಿ ಸೋನಾಲ್ ಜೋಡಿ
ಕೆಲ ದಿನಗಳಿಂದ ಹರಿದಾಡುತ್ತಿದ್ದ ಗುಸುಗುಸು ಸುದ್ದಿಗೆ ಕೊನೆಗೂ ಬ್ರೇಕ್
ಕನ್ನಡ ಚಿತ್ರರಂಗದ ನಿರ್ದೇಶಕ ಹಿರಿಯ ನಟ ದಿವಂಗತ ಸುಧೀರ್ ಅವರ ಪುತ್ರ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮೊಂತೆರೋ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೀಗ ಖಚಿತವಾಗಿದೆ. ಕೆಲ ದಿನಗಳಿಂದ ತರುಣ್ ಸುಧೀರ್ ಮಾತ್ತು ಸೋನಾಲ್ ಮದುವೆಯಾಗಲಿದ್ದಾರೆ ಎಂಬ ಅಂತೆ-ಕಂತೆಗಳು ಚಿತ್ರರಂಗ ಮತ್ತು ಅಭಿಮಾನಿಗಳ ನಡುವೆ ಹರಿದಾಡುತ್ತಿದ್ದರೂ ಈ ಬಗ್ಗೆ ತರುಣ್ ಸುಧೀರ್ ಅವರಾಗಲಿ, ಸೋನಾಲ್ ಅವರಾಗಲಿ ಎಲ್ಲೂ ತುಟಿಬಿಚ್ಚಿರಲಿಲ್ಲ. ಇದೀಗ ಈ ವಿಷಯದ ಬಗ್ಗೆ ಸ್ವತಃ ತರುಣ್ ಅವರೇ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ತರುಣ್ ಸುಧೀರ್ ಹಾಗೂ ಸೋನಾಲ್ ಮದುವೆಗೆ ಮುಹೂರ್ತ ಫಿಕ್ಸ್
ಸೋಮವಾರ (ಜುಲೈ 22) ತರುಣ್ ಸುಧೀರ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತರುಣ್ ಮತ್ತು ಸೋನಾಲ್ ಅವರ ಮುದ್ದಾದ ವಿಡಿಯೋದ ಜೊತೆಗೆ ‘ನಾನು ತರುಣ್, ನನ್ನ ನಾಯಕಿ ಸೋನಾಲ್ ಜೊತೆಗಿನ ನನ್ನ ಶ್ರೇಷ್ಠ ಪ್ರೇಮಕಥೆಯನ್ನು ನಿರ್ದೇಶಿಸುತ್ತಿದ್ದೇನೆ’ ಎಂದು ಒಕ್ಕಣೆ ಬರೆದಿದ್ದಾರೆ. 

ಜೊತೆಗೆ ಈ ಪೋಸ್ಟ್‌ಗೆ #TharunSonalTAKEOK ಎಂದು ಹ್ಯಾಷ್ ಟ್ಯಾಗ್ ನೀಡಿದ್ದಾರೆ. ಅಂದಹಾಗೆ ತರುಣ್ ಮತ್ತು ಸೋನಾಲ್ ಮೊಂತೆರೋ ಅವರ ವಿವಾಹ ಆಗಸ್ಟ್ 11ರಂದು ನಡೆಯಲಿದೆ.
ನಿರ್ದೇಶಕನಿಗೆ ನಾಯಕಿ ಸಿಕ್ಕಾಯ್ತು…
ರವಿವಾರ ಇವರಿಬ್ಬರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಮೊದಲ ಬಾರಿಗೆ ಊಹಾಪೋಹಗಳನ್ನು ತಣಿಸುವ ಕೆಲಸ ಮಾಡಿದ್ದರು. ತರುಣ್, ‘ಕೊನೆಗೂ ನಿರ್ದೇಶಕ ತನ್ನ ಜೀವನದ ನಾಯಕಿಯನ್ನು ಕಂಡು ಕೊಂಡರು’ ಎಂದು ಪೋಸ್ಟ್ ಮಾಡಿದ್ದಾರೆ. ಸೋನಾಲ್ ಕೂಡಾ ‘ಕೊನೆಗೂ ನಾಯಕಿ ತನ್ನ ಜೀವನದ ನಿರ್ದೇಶಕನನ್ನು ಕಂಡುಕೊಂಡಳು’ ಎಂದು ಪೋಸ್ಟ್ ಮಾಡಿದ್ದರು.
ತರುಣ್ ನಿರ್ದೇಶನ ಮಾಡಿದ್ದ ‘ರಾಬರ್ಟ್’ ಸಿನಿಮಾದಲ್ಲಿ ಸೋನಾಲ್ ಮೊಂತೆರೋ ನಟಿಸಿದ್ದರು. ಮಂಗಳೂರು ಮೂಲದ ನಟಿ ಸೋನಾಲ್ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಮೊದಲು ತುಳು ಸಿನಿಮಾಗಳಲ್ಲಿ ನಟಿಸಿದ್ದರು.