ಸೆಟ್ಟೇರಲು ರೆಡಿಯಾದ ಶಿವಣ್ಣನ 131ನೇ ಸಿನಿಮಾ

ಶಿವರಾಜ್ ಕುಮಾರ್ ಭೇಟಿಯಾದ ಚಿತ್ರತಂಡ
ಶಿವಣ್ಣ ಅಭಿಮಾನಿಗಳಿಗೆ ಚಿತ್ರತಂಡದ ಕಡೆಯಿಂದ ಗುಡ್ ನ್ಯೂಸ್
ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 131ನೇ ಸಿನೆಮಾದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಇನ್ನೂ ಹೆಸರಿಡದ ಈ ಸಿನೆಮಾದ ಇಂಟ್ರೂಡಕ್ಷನ್ ಟೀಸರ್ ಇತ್ತೀಚೆಗಷ್ಟೇ ಶಿವಣ್ಣನ ಜನ್ಮದಿನಕ್ಕೆ ರಿಲೀಸ್ ಮಾಡಿದ್ದ ಚಿತ್ರತಂಡ, ಶಿವಣ್ಣನ ಅಭಿಮಾನಿಗಳ ಕುತೂಹಲವನ್ನು ಕೆರಳಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದು, ಶೀಘ್ರದಲ್ಲಿಯೇ ಶಿವಣ್ಣನ 131ನೇ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಲಿದೆ.
ಶೂಟಿಂಗ್ ಅಖಾಡಕ್ಕೆ ಇಳಿಯಲು ಶಿವಣ್ಣರೆಡಿ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 131ನೇ ಸಿನೆಮಾದ ಶೂಟಿಂಗ್ ಅಖಾಡಕ್ಕೆ ಧುಮುಕಲು ಚಿತ್ರತಂಡ ಸಜ್ಜಾಗಿದೆ. ಆದಷ್ಟು ಬೇಗ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣ ನಡೆಸಲು ಇಡೀ ಬಳಗ ಸಜ್ಜಾಗಿದೆ. ಅದಕ್ಕಾಗಿ ಇಂದು ಇಡೀ ತಂಡ ಶಿವಣ್ಣನನ್ನು ಭೇಟಿಯಾಗಿದೆ. ಬೆಂಗಳೂರಿನ ನಾಗವಾರದಲ್ಲಿರುವ ಶಿವರಾಜಕುಮಾರ್ ಅವರ ನಿವಾಸಕ್ಕೆ ನಿರ್ದೇಶಕ ಕಾರ್ತಿಕ್ ಅದ್ವೈತ್, ನಿರ್ಮಾಪಕರಾದ ಎನ್ ಎಸ್ ರೆಡ್ಡಿ ಹಾಗೂ ಸುಧೀರ್, ಛಾಯಾಗ್ರಹಕ ಎ. ಜೆ ಶೆಟ್ಟಿ, ಸಂಕಲನಕಾರ ದೀಪು ಎಸ್. ಕುಮಾರ್ ಭೇಟಿ ಕೊಟ್ಟು ಸಿನೆಮಾದ ಬಾಹುತೇಕ ಚರ್ಚೆಗಳನ್ನು ಪೂರ್ಣಗೊಳಿಸಿ, ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ ಕಾರ್ತಿಕ್ ಅದ್ವೈತ್ ಆ್ಯಕ್ಷನ್-ಕಟ್
ಇನ್ನು ಯುವ ನಿರ್ದೇಶಕ ಕಾರ್ತಿಕ್ ಅದ್ವೈತ್, ಈ ಸಿನೆಮಾದಲ್ಲಿ ಶಿವಣ್ಣನಿಗೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೇ ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನೆಮಾ. ಇದೊಂದು ಆ್ಯಕ್ಷನ್-ಥ್ರಿಲ್ಲರ್ ಸಿನೆಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ʼಘೋಸ್ಟ್ʼ ಸಿನೆಮಾದ ಖ್ಯಾತಿಯ ವಿ. ಎಂ ಪ್ರಸನ್ನ ಹಾಗೂ ಸೀತಾರಾಮಂ ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಸಾಥ್ ಕೊಡುತ್ತಿದ್ದಾರೆ.
‘ವಿಕ್ರಂ ವೇದ’, ‘ಆರ್.ಡಿ.ಎಕ್ಸ್’, ‘ಖೈದಿ’ ಸಿನೆಮಾ ಖ್ಯಾತಿಯ ಸ್ಯಾಮ್ ಸಿ. ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್. ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ‘ಭುವನೇಶ್ವರಿ ಪ್ರೊಡಕ್ಷನ್’ ನಡಿ ಎಸ್ ಎನ್ ರೆಡ್ಡಿ ಹಾಗೂ ಸುಧೀರ್ ಪಿ. ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಮಣ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಉಳಿದಂತೆ ಈ ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.