Video

‘ಗುಂಮ್ಟಿ’ಯ ‘ಹಾಡುವ ಹಕ್ಕಿ…’ ಮೆಲೋಡಿ ಹಾಡು ಹೊರಕ್ಕೆ

‘ಗುಂಮ್ಟಿ’ಯ ಸುಮಧುರ ಗೀತೆಗೆ ಮೆಹಬೂಬ್‌ ಸಾಬ್‌ ಧ್ವನಿ

ಮೊದಲ ಹಾಡನ್ನು ಬಿಡುಗಡೆ ಮಾಡಿದ ‘ಗುಂಮ್ಟಿ’ ಚಿತ್ರತಂಡ

ಈಗಾಗಲೇ ತನ್ನ ಟೈಟಲ್‌ ಮತ್ತು ಕಂಟೆಂಟ್‌ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಮಂದಿಯ ಗಮನ ಸೆಳೆಯುತ್ತಿರುವ ‘ಗುಂಮ್ಟಿ’ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಸಿನೆಮಾದ ಚಿತ್ರೀಕರಣ ಮುಗಿಸಿ, ಸದ್ಯ ‘ಗುಂಮ್ಟಿ’ ಸಿನೆಮಾದ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಸಿನೆಮಾದ ಮೊದಲ ಮೆಲೋಡಿ ಹಾಡನ್ನು ಬಿಡುಗಡೆ ಮಾಡಿದೆ.

ಮೆಹಬೂಬ್‌ ಸಾಬ್‌ ಹಾಡಿದ ಮೆಲೋಡಿ ಗೀತೆ…

ಗಾಯಕ ಮೆಹಬೂಬ್‌ ಸಾಬ್‌ ಅವರ ಧ್ವನಿಯಲ್ಲಿ ಮೂಡಿಬಂದಿರುವ ‘ಹಾಡುವ ಹಕ್ಕಿ ಹಾಡುತೈತಿ ಮನುಸಾ… ಕಾಯಕ ಮಾಡಿ ಕಾಣೋ ನೀನು ಕನಸಾ…’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿಗೆ, ಡೊಂಡಿ ಮೋಹನ್‌ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಅತ್ಯಂತ ಅರ್ಥಗರ್ಭಿತವಾಗಿ ಸುಮಧುರವಾಗಿ ಮೂಡಿ ಬಂದಿರುವ ಈ ಗೀತೆ ‘ತಸ್ಮೈ ಪ್ರೊಡಕ್ಷನ್ಸ್’ ಯು-ಟ್ಯೂಬ್‌ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

‘ಗುಂಮ್ಟಿ’ ಸಿನೆಮಾದ ‘ಹಾಡುವ ಹಕ್ಕಿ ಹಾಡುತೈತಿ ಮನುಸಾ… ಕಾಯಕ ಮಾಡಿ ಕಾಣೋ ನೀನು ಕನಸಾ…’ ಹಾಡಿನ ಲಿರಿಕಲ್‌ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

 

ಕುಡುಬಿ ಜನಾಂಗದ ಭಾವನಾತ್ಮಕ ‘ಚಿತ್ರ’ಣ…

ಇನ್ನು ‘ಗುಂಮ್ಟಿ’ ಸಿನೆಮಾದಲ್ಲಿ ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯೊಂದು ತೆರೆಮೇಲೆ ಅನಾವರಣವಾಗಲಿದೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ‘ಗುಂಮ್ಟಿ’ ಸಿನೆಮಾದಲ್ಲಿ ಮನಮುಟ್ಟುವಂತೆ ಹೇಳಲು ಹೊರಟಿದೆ ಚಿತ್ರತಂಡ. ಉಡುಪಿ, ಕುಂದಾಪುರ, ಶಿರಸಿ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರತಂಡ ‘ಗುಂಮ್ಟಿ’ ಚಿತ್ರೀಕರಣ ನಡೆಸಲಾಗಿದೆ.

ಸಂದೇಶ್‌ ಶೆಟ್ಟಿ ‘ಗುಂಮ್ಟಿ’ ಸೂತ್ರಧಾರಿ!

ಈ ಹಿಂದೆ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನೆಮಾಗಳನ್ನು ನಿರ್ದೇಶಿಸಿದ್ದ ಸಂದೇಶದ ಶೆಟ್ಟಿ ಆಜ್ರಿ, ‘ಗುಂಮ್ಟಿ’ ಸಿನೆಮಾವನ್ನು ನಿರ್ದೇಶಿಸಿ ತೆರೆಮೇಲೆ ತರುತ್ತಿದ್ದಾರೆ. ಜೊತೆಗೆ ಈ ಸಿನೆಮಾದಲ್ಲಿ ಸಂದೇಶ್ ಶೆಟ್ಟಿ ತೆರೆಮೇಲೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿನೆಮಾದಲ್ಲಿ ನಾಯಕ ಸಂದೇಶ್ ಶೆಟ್ಟಿ ಆಜ್ರಿ ಅವರಿಗೆ ವೈಷ್ಣವಿ ನಾಡಿಗ್ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ‘ಗುಂಮ್ಟಿ’ ಸಿನಿಮಾ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನವಿದೆ.

Related Posts

error: Content is protected !!