ʼಅಮೇಜಾನ್ ಪ್ರೈಮ್ʼನಲ್ಲಿ ʼಚಿದಂಬರʼನ ಅಡುಗೆ!

ಬಿಡುಗಡೆಯಾದ ಒಂದೂವರೆ ತಿಂಗಳಲ್ಲೇ ʼಅಮೇಜಾನ್ ಪ್ರೈಮ್ʼನಲ್ಲಿ ಸ್ಕ್ರೀನಿಂಗ್
ಅನಿರುದ್ಧ ಹೊಸ ಸಿನೆಮಾ ಈಗ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯ
ನಟ ಅನಿರುದ್ಧ ಜತ್ಕರ್ ನಾಯಕ ನಟನಾಗಿ ಅಭಿನಯಿಸಿದ್ದ ʼಶೆಫ್ ಚಿದಂಬರʼ ಸಿನೆಮಾ ಇದೇ ಜೂನ್ ಎರಡನೇ ವಾರ (ಜೂನ್ 14ಕ್ಕೆ) ತೆರೆಗೆ ಬಂದಿದ್ದು ಅನೇಕರಿಗೆ ಗೊತ್ತಿರಬಹುದು. ಥಿಯೇಟರಿನಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ʼಶೆಫ್ ಚಿದಂಬರʼ ಶೀಘ್ರದಲ್ಲಿಯೇ ಓಟಿಟಿ ಮೂಲಕ ಮನೆಯ ಹಾಲ್‌ಗೂ ಎಂಟ್ರಿಯಾಗುತ್ತಿದ್ದಾನೆ.
ಹೌದು, ʼಶೆಫ್ ಚಿದಂಬರʼ ಸಿನೆಮಾದ ಓಟಿಟಿ ಹಕ್ಕುಗಳು ʼಅಮೇಜಾನ್ ಪ್ರೈಮ್ʼ ಪಾಲಾಗಿದ್ದು, ಇದೇ ಜುಲೈ ಅಂತ್ಯದಿಂದ ʼಅಮೇಜಾನ್ ಪ್ರೈಮ್ʼ ಓಟಿಟಿಯಲ್ಲಿ ʼಶೆಫ್ ಚಿದಂಬರʼ ಸಿನೆಮಾ ಪ್ರಸಾರವಾಗಲಿದೆ. ಎಂ. ಆನಂದರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಸ್ಪೆನ್ಸ್ ಕಂ ಥ್ರಿಲ್ಲರ್ ಶೈಲಿಯ ʼಶೆಫ್ ಚಿದಂಬರʼ ಸಿನೆಮಾದಲ್ಲಿ ಅನಿರುದ್ಧ್ ಅವರಿಗೆ ನಿಧಿ ಸುಬ್ಬಯ್ಯ ಮತ್ತು ರಚೆಲ್ ಡೇವಿಡ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತುಳಸಿ ಶಿವಮಣಿ, ಶರತ್ ಲೋಹಿತಾಶ್ವ, ಕೆ. ಎಸ್. ಶ್ರೀಧರ್ ಮೊದಲಾದವರು ʼಶೆಫ್ ಚಿದಂಬರʼ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಥಿಯೇಟರಿನಿಂದ ನೇರವಾಗಿ ಮನೆಗೇ ಬಂದ ʼಶೆಫ್ ಚಿದಂಬರʼ!
ʼಧಮ್ತಿ ಸ್ಟುಡಿಯೋಸ್ʼ ಬ್ಯಾನರಿನಲ್ಲಿ ರೂಪಾ ಡಿ. ಎನ್ ʼಶೆಫ್ ಚಿದಂಬರʼ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಒಟ್ಟಾರೆ ಕನ್ನಡದಲ್ಲಿ ಹೊಸ ಸಿನೆಮಾಗಳು ʼಅಮೇಜಾನ್ ಪ್ರೈಮ್ʼ ನಂತಹ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿಲ್ಲ ಎಂಬ ಮಾತುಗಳ ನಡುವೆಯೇ ʼಶೆಫ್ ಚಿದಂಬರʼ ಥಿಯೇಟರಿನಿಂದ ಮನೆಯೊಳಗೂ ಕಾಲಿಡುತ್ತಿದ್ದು, ʼಶೆಫ್ ಚಿದಂಬರʼನ ಸಿನೆಮಾ ರುಚಿಯನ್ನು ಪ್ರೇಕ್ಷಕರು ಎಷ್ಟರ ಮಟ್ಟಿಗೆ ಆಸ್ವಾಧಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.