‘ಪೌಡರ್’ ಸಿನೆಮಾ ಬಿಡುಗಡೆ ಮುಂದೂಡಿಕೆ

ಆ. 15ರ ಬದಲು ಆ. 23ಕ್ಕೆ ‘ಪೌಡರ್’ ಸಿನೆಮಾ ತೆರೆಗೆ
ಸಾಲು ಸಾಲು ಸಿನೆಮಾಗಳ ಸಾಲು.. ‘ಪೌಡರ್’ ರಿಲೀಸ್ ಪೋಸ್ಟ್ ಪೋನ್!
ನಟರಾದ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಪೌಡರ್’ ಸಿನೆಮಾ ಇದೇ ಆಗಸ್ಟ್ 15 ರಂದು ತೆರೆಗೆ ಬರಬೇಕಿತ್ತು. ಸುಮಾರು ಮೂರು ತಿಂಗಳ ಮುಂಚೆಯೇ ‘ಪೌಡರ್’ ಸಿನೆಮಾದ ಬಿಡುಗಡೆಯ ದಿನಾಂಕವನ್ನು ಅಂತಿಮಗೊಳಿಸಿದ್ದ ಚಿತ್ರತಂಡ, ಭರದಿಂದ ಪ್ರಚಾರ ಕಾರ್ಯಗಳಲ್ಲೂ ನಿರತವಾಗಿತ್ತು. ಆದರೆ ಇದೀಗ ‘ಪೌಡರ್’ ಸಿನೆಮಾದ ಬಿಡುಗಡೆ ಹತ್ತಿರವಾಗುತ್ತಿದ್ದಂತೆ, ದಿಢೀರನೆ ಚಿತ್ರತಂಡ ‘ಪೌಡರ್’ ಸಿನೆಮಾದ ಬಿಡುಗಡೆಯನ್ನು ಮುಂದೂಡಿದೆ.
‘ಪೌಡರ್’ ಮುಂದೂಡಲು ಕಾರಣವೇನು..?
ಅಂದಹಾಗೆ, ‘ಪೌಡರ್’ ಸಿನೆಮಾದ ಬಿಡುಗಡೆಯನ್ನು ಮುಂದೂಡಲು ಕಾರಣವೇನು? ಎಂಬ ಪ್ರಶ್ನೆಗೆ ಚಿತ್ರತಂಡ ಮೂಲಗಳ ಉತ್ತರ ಹೀಗಿದೆ; ‘ಆಗಸ್ಟ್ 15ರಂದು ಸಾಕಷ್ಟು ಸಿನೆಮಾಗಳು ತೆರೆಗೆ ಬರುತ್ತಿವೆ. ಕನ್ನಡ ಸಿನಿಮಾಗಳ ಜೊತೆಗೆ ತೆಲುಗು, ತಮಿಳು, ಹಿಂದಿ ಸೇರಿದಂತೆ ಪರಭಾಷೆಯ ಕನಿಷ್ಟ ಹತ್ತರಿಂದ ಹದಿನೈದು ಸಿನೆಮಾಗಳು ಬಿಡುಗಡೆಯಾಗುತ್ತಿವೆ. ಇಂಥ ಸಮಯದಲ್ಲಿ ‘ಪೌಡರ್’ ಸಿನೆಮಾವನ್ನು ಬಿಡುಗಡೆ ಮಾಡಿದರೆ, ಥಿಯೇಟರ್ ಸಮಸ್ಯೆ ಜೊತೆಗೆ ಗಳಿಗೆಯ ಮೇಲೂ ಪ್ರತಿಕೂಲ ಪರಿಣಾಮ ಎದುರಾಗಬಹುದು. ಹೀಗಾಗಿ ‘ಪೌಡರ್’ ಸಿನೆಮಾದ ಬಿಡುಗಡೆಯನ್ನು ಒಂದುವಾರಗಳ ಕಾಲ ಮುಂದೂಡಿ, ಆಗಸ್ಟ್ 15ರ ಬದಲಿಗೆ ಆಗಸ್ಟ್ 23ಕ್ಕೆ ಸಿನೆಮಾವನ್ನು ತೆರೆಗೆ ತರಲು ಯೋಚಿಸಲಾಗಿದೆʼ ಎನ್ನಲಾಗುತ್ತಿದೆ.
ಆ. 15ರ ಬದಲಿಗೆ ಆ. 23ಕ್ಕೆ ‘ಪೌಡರ್’ ಸಿನೆಮಾ ರಿಲೀಸ್
ಒಂದೇ ದಿನ ಸಾಕಷ್ಟು ಸಿನೆಮಾಗಳು ಬಿಡುಗಡೆಯಾದರೆ ಬಾಕ್ಸಾಫೀಸ್ ನಲ್ಲಿ ಕ್ಲ್ಯಾಷ್ ಆಗಲಿದೆ. ಕಲೆಕ್ಷನ್ ಮೇಲೆಯೂ ಹೊಡೆತ ಬೀಳಲಿದೆ. ಮೊದಲೇ ಕನ್ನಡ ಚಿತ್ರರಂಗದ ಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಬಾಕ್ಸಾಫೀಸ್ ವಾರ್ ಬೇಡ ಎಂಬುದು ‘ಪೌಡರ್’ ಸಿನೆಮಾ ರಿಲೀಸ್ ಮುಂದೂಡಲು ಕಾರಣ ಎನ್ನಲಾಗುತ್ತಿದೆ. ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ‘ಪೌಡರ್’ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದು, ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ʼಕೆ.ಆರ್.ಜಿ.ಸ್ಟೂಡಿಯೋಸ್ʼ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ʼಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ʼ ಬ್ಯಾನರ್ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಿದ್ದಾರೆ.