Street Beat

ವಿನಯ್ ರಾಜಕುಮಾರ್ ‘ಪೆಪೆ’ ಸಿನಿಮಾಗೆ ‘ಎ’ ಸರ್ಟಿಫಿಕೇಟ್!

‘ಎ’ ಸರ್ಟಿಫಿಕೇಟ್ ತೆಗೆದುಕೊಂಡು ಸೆನ್ಸಾರ್ ನಲ್ಲಿ ಪಾಸಾದ ‘ಪೆಪೆ’

ತೆರೆಗೆ ಬರಲು ತಯಾರಾದ ವಿನಯ್ ರಾಜಕುಮಾರ್ ಹೊಸಚಿತ್ರ

ಕೆಲ ತಿಂಗಳ ಹಿಂದಷ್ಟೇ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಯಶಸ್ಸಿನ ಮೂಲಕ ಗೆಲುವಿನ ನಗು ಬೀರಿದ್ದ ನಟ ವಿನಯ್ ರಾಜಕುಮಾರ್ ಈಗ ಮತ್ತೊಂದು ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ವಿನಯ್ ರಾಜಕುಮಾರ್ ಅಭಿನಯಿಸಿರುವ ಹೊಸಚಿತ್ರ ‘ಪೆಪೆ’ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇದೀಗ ಪ್ರಾದೇಶಿಕ ಸೆನ್ಸಾರ್‌ ಮಂಡಳಿಯಲ್ಲಿ ‘ಎ’ ಸರ್ಟಿಫಿಕೇಟ್ ತೆಗೆದುಕೊಂಡು ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ಪಡೆದುಕೊಂಡಿದೆ. ಇತ್ತೀಚೆಗೆ ‘ಪೆಪೆ’ ಸಿನೆಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಸಿನೆಮಾದಲ್ಲಿ ಕ್ರೌರ್ಯದ ಅಂಶಗಳು ಇರುವುದರಿಂದ ಸಿನೆಮಾಕ್ಕೆ ಕೆಲವು ಕಡೆಗಳಲ್ಲಿ ಸಣ್ಣ ಬದಲಾವಣೆಗಳಿಗೆ ಸೂಚಿಸಿ ‘ಎ’ ಸರ್ಟಿಫಿಕೇಟ್ ನೀಡಿದೆ.

ಮಾಸ್‌ಲುಕ್‌ನಲ್ಲಿ ವಿನಯ್‌ ಎಂಟ್ರಿಗೆ ರೆಡಿ…

ಈಗಾಗಲೇ ಒಂದಷ್ಟು ಕ್ಲಾಸ್ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಮಿಗಳನ್ನು ರಂಜಿಸಿದ್ದ ವಿನಯ್ ರಾಜ್ ಕುಮಾರ್ ʼಪೆಪೆʼ ಸಿನೆಮಾಗಾಗಿ ಪಕ್ಕಾ ಮಾಸ್‌ ಅವತಾರ ತಾಳಿದ್ದಾರೆ. ಯುವ ನಿರ್ದೇಶಕ ಶ್ರೀಲೇಶ್ ಎಸ್. ನಾಯರ್ ನಿರ್ದೇಶನದ ಈ ಸಿನೆಮಾದಲ್ಲಿ ವಿನಯ್ ರಾಜಕುಮಾರ್‌ ರಗಡ್‌ ಲುಕ್‌ ಅಬ್ಬರಿಸಿದ್ದಾರೆ. ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಚಿತ್ರ ಇದಾಗಿದ್ದು, ಇದುವರೆಗೂ ಕಾಣಿಸಿಕೊಂಡಿರದ ಹೊಸ ರೀತಿಯ ಪಾತ್ರದಲ್ಲಿ ವಿನಯ್ ಕಾಣಿಸಿಕೊಂಡಿದ್ದಾರೆ.

ಪ್ರಚಾರ ಕಾರ್ಯಕ್ಕೆ ‘ಪೆಪೆ’ ಚಿತ್ರತಂಡದ ಯೋಚನೆ

ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ. ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ʼಉದಯ್‌ ಸಿನಿ ವೆಂಚರ್‌ʼ ಮತ್ತು ʼದೀಪ ಫಿಲ್ಮ್ಸ್ʼ ಬ್ಯಾನರ್‌ನಡಿ ಉದಯ್ ಶಂಕರ್. ಎಸ್ ಹಾಗೂ ಕೋಲಾರದ ಬಿ. ಎಮ್. ಶ್ರೀರಾಮ್ ಈ ಚಿತ್ರಕ್ಕೆ ಬಂಡವಾಳ ಹೂಡಿನಿರ್ಮಾಣ ಮಾಡಿದ್ದಾರೆ.

ಸದ್ಯ ಸೆನ್ಸಾರ್‌ ನಿಂದ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ಪಡೆದುಕೊಂಡಿರುವ ‘ಪೆಪೆ’ ಸಿನೆಮಾವನ್ನು ಆದಷ್ಟು ಬೇಗ ತೆರೆಗೆ ತರುವ ಯೋಚನೆಯಲ್ಲಿರುವ ಚಿತ್ರತಂಡ ನಿಧಾನವಾಗಿ ಸಿನೆಮಾದ ಪ್ರಚಾರ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

Related Posts

error: Content is protected !!