‘ಎಕ್ಕ’ ಎಂಬ ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯುವ ರಾಜಕುಮಾರ್ ಎರಡನೇ ಚಿತ್ರದ ಶೀರ್ಷಿಕೆ ಘೋಷಣೆ
ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರಕ್ಕೆ ‘ಎಕ್ಕ’ ಎಂಬ ಟೈಟಲ್
ಭೂಗತ ಜಗತ್ತಿಗೆ ತುತ್ತಾದವನಿಗೆ ಆಗುವ ಅನುಭವವನ್ನು ಹೇಳುವ ಕಥೆ!
‘ಯುವ’ ಸಿನೆಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ‘ದೊಡ್ಮನೆ ಹುಡುಗ’ ಯುವ ರಾಜಕುಮಾರ್ ಈಗ ಎರಡನೇ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಕೆಲ ದಿನಗಳ ಹಿಂದಷ್ಟೇ ಯುವ ರಾಜಕುಮಾರ್ ಅಭಿನಯದ ಎರಡನೇ ಸಿನೆಮಾದ ಬಗ್ಗೆ ಮಾಹಿತಿ ನೀಡಿದ್ದ ಚಿತ್ರತಂಡ, ಇದೀಗ ‘ಕನ್ನಡ ರಾಜ್ಯೋತ್ಸವ’ದ ಶುಭ ಸಂದರ್ಭದಲ್ಲಿ ಈ ಸಿನೆಮಾದ ಟೈಟಲ್ ಅನ್ನು ಅಧಿಕೃತವಾಗಿ ಘೋಷಿಸಿದೆ.
ಯುವ ರಾಜಕುಮಾರ್ ಕೈಯಲ್ಲಿ ಸಿಕ್ಕ ‘ಎಕ್ಕ’…!
ಅಂದಹಾಗೆ, ಯುವ ರಾಜಕುಮಾರ್ ಅಭಿನಯದ ಎರಡನೇ ಸಿನೆಮಾಕ್ಕೆ ‘ಎಕ್ಕ’ ಎಂದು ಟೈಟಲ್ ಇಡಲಾಗಿದೆ. ‘ಎಕ್ಕ’ ಚಿತ್ರಕ್ಕೆ ರೋಹಿತ್ ಪದಕಿ ಹಾಗೂ ವಿಕ್ರಂ ಹತ್ವಾರ್ ಜಂಟಿಯಾಗಿ ಕಥೆ, ಚಿತ್ರಕಥೆ ಬರೆದಿದ್ದು, ರೋಹಿತ್ ಪದಕಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಸದ್ಯ ‘ಎಕ್ಕ’ ಸಿನೆಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ನಾಯಕ ನಟ ಯುವ ರಾಜಕುಮಾರ್, ರಕ್ತಸಿಕ್ತ ಕೈಯಲ್ಲಿ ಆಯುಧವನ್ನು ಹಿಡಿದುಕೊಂಡು ಮಾಸ್, ಆ್ಯಕ್ಷನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಯುವ ರಾಜಕುಮಾರ್ ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚೇನೂ ಮಾಹಿತಿ ಹಂಚಿಕೊಂಡಿಲ್ಲ.
‘ಎಕ್ಕ’ ಚಿತ್ರಕ್ಕೆ ಮೂರು ನಿರ್ಮಾಣ ಸಂಸ್ಥೆಗಳ ಸಾಥ್
‘ಎಕ್ಕ’ ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಉಳಿದಂತೆ ಸತ್ಯ ಹೆಗಡೆ ಈ ಚಿತ್ರಕ್ಕೆ ಮುಖ್ಯ ಛಾಯಾಗ್ರಹಕರಾಗಿದ್ದು, ದೀಪು ಎಸ್. ಕುಮಾರ್ ಸಂಕಲನಕಾರರಾಗಿರುತ್ತಾರೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ. ಈ ಚಿತ್ರವನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ‘ಪಿ.ಆರ್.ಕೆ.ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ, ಜಯಣ್ಣ ಹಾಗೂ ಭೋಗೇಂದ್ರ ‘ಜಯಣ್ಣ ಕಂಬೈನ್ಸ್’ ಲಾಂಛನದಲ್ಲಿ ಮತ್ತು ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ‘ಕೆ.ಆರ್.ಜಿ.ಸ್ಟೂಡಿಯೋಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಕನ್ನಡದ ಮೂರು ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಗಳು ‘ಎಕ್ಕ’ ಸಿನೆಮಾದ ನಿರ್ಮಾಣಕ್ಕೆ ಜಂಟಿಯಾಗಿ ಸಾಥ್ ನೀಡುತ್ತಿದ್ದು, ಬಿಗ್ ಬಜೆಟ್‌ನಲ್ಲಿ ಈ ಸಿನೆಮಾ ಮೂಡಿಬರಲಿದೆ ಎಂಬುದು ಚಿತ್ರತಂಡದ ಮೂಲಗಳು ನೀಡಿರುವ ಪ್ರಾಥಮಿಕ ಮಾಹಿತಿ.
ಶೀಘ್ರದಲ್ಲಿಯೇ ‘ಎಕ್ಕ’ ಚಿತ್ರೀಕರಣ ಶುರು
ಈಗಾಗಲೇ ‘ಎಕ್ಕ’ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ನವೆಂಬರ್ 28ರಿಂದ ಸಿನೆಮಾದ ಚಿತ್ರೀಕರಣ ಆರಂಭಿಸುವ ಯೋಜನೆಯಲ್ಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ನವೆಂಬರ್ ನಲ್ಲಿ ‘ಎಕ್ಕ’ ಸಿನೆಮಾದ ಮುಹೂರ್ತ ನೆರವೇರಲಿದ್ದು, 2025ರ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.