ಕರಾವಳಿ ಸೊಗಡಿನ ‘ದಿಂಸೋಲ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

‘ಅಭಿರಾಮಚಂದ್ರ’ ತಂಡದ ಮತ್ತೊಂದು ಪ್ರಯತ್ನ…
ಕರಾವಳಿಯ ಸೊಗಡಿನ ಮತ್ತೊಂದು ಸಿನೆಮಾಕ್ಕೆ ಚಿತ್ರತಂಡದ ತಯಾರಿ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡದಿಂದ ‘ದಿಂಸೋಲ್’ ಫಸ್ಟ್ ಲುಕ್ ಅನಾವರಣ
ಈ ಹಿಂದೆ ರಕ್ಷಿತ್ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಯುವ ಪ್ರತಿಭೆ ನಾಗೇಂದ್ರ ಗಾಣಿಗ ಆ ನಂತರ ‘ಅಭಿರಾಮಚಂದ್ರ’ ಸಿನೆಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್ ವುಡ್‌ಗೆ ಪಾರಿಚಾಯಾವಾಗಿದ್ದರು. ತಮ್ಮ ಮೊದಲ ಚಿತ್ರದಲ್ಲಿ ಬಾಲ್ಯ, ಸ್ನೇಹದ ಜೊತೆಗೆ ತ್ರಿಕೋನ ಪ್ರೇಮಕಥೆ ಹೇಳಿದ್ದ ನಾಗೇಂದ್ರ ಗಾಣಿಗ ಈಗ ಕರಾವಳಿ ಸಂಸ್ಕೃತಿಯ ಸೊಗಡನ್ನು ‘ದಿಂಸೋಲ್’ ಸಿನೆಮಾ ಮೂಲಕ ತೆರೆಮೇಲೆ ಹೇಳಲು ಹೊರಟಿದ್ದಾರೆ. ಹೌದು, ನಾಗೇಂದ್ರ ಗಾಣಿಗ ರಚಿಸಿ, ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ‘ದಿಂಸೋಲ್’ ಎಂದು ಟೈಟಲ್ ಇಡಲಾಗಿದ್ದು ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರತಂಡ ‘ದಿಂಸೋಲ್’ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
ಏನಿದು ‘ದಿಂಸೋಲ್’ ? ಇದರಲ್ಲಿ ಅಂಥದ್ದೇನಿದೆ..?
‘ದಿಂಸೋಲ್’ ಎಂಬುದು ಕರ್ನಾಟಕದ ಕರಾವಳಿ ಭಾಗದಲ್ಲಿ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಒಂದು ಸಾಂಸ್ಕೃತಿಕ ಆಚರಣೆ. ‘ದಿಂಸೋಲ್’ ಸಿನೆಮಾದಲ್ಲಿ ಕರಾವಳಿ ಎಲ್ಲ ಸಂಸ್ಕೃತಿಯನ್ನು ಒಂದು ನವಿರಾದ ಕಥೆಯ ಮೂಲಕ ನಾಗೇಂದ್ರ ಗಾಣಿಗ ದೃಶ್ಯರೂಪಕ್ಕೆ ಇಳಿಸುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ‘ದಿಂಸೋಲ್’ ಸಿನೆಮಾದ ಫಸ್ಟ್ ಲುಕ್ ಸಂಪೂರ್ಣ ಕೆಂಪು ಬಣ್ಣದಿಂದ ಕೂಡಿದ್ದು, ಆದಿಶಕ್ತಿ ದೇವಿಯು ರಕ್ತೇಶ್ವರಿಯಾಗಿ ಉಗ್ರ ಅವತಾರ ತಾಳಿದ್ದು, ಪೋಸ್ಟರ್ ನಾನಾ ಕಥೆ ಹೇಳುತ್ತಿದೆ.
‘ದಿಂಸೋಲ್’ ಚಿತ್ರತಂಡಲ್ಲಿ ಯಾರಿದ್ದಾರೆ..?
ಈ ಹಿಂದೆ ‘ಅಭಿರಾಮಚಂದ್ರ’ ಸಿನೆಮಾದಲ್ಲಿ ಜೋಡಿಯಾಗಿ ನಟಿಸಿದ್ದ ರಥಕಿರಣ್ ಹಾಗೂ ಶಿವಾನಿ ರೈ ‘ದಿಂಸೋಲ್’ ಚಿತ್ರದಲ್ಲಿಯೂ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಮಾನಸಿ ಸುಧೀರ್, ದೇವದಾಸ್ ಕಾಪಿಕಾಡ್, ರಘು ಪಾಂಡೇಶ್ವರ್, ದೀಪಕ್ ರೈ ಪಣಾಜೆ, ಮೈಮ್ ರಾಮ್ ದಾಸ್, ಗಣೇಶ್ ಕಾರಂತ್, ಸೂರಜ್, ಸುರಭಿ ಸೇರಿದಂತೆ ಕರಾವಳಿ ಭಾಗದ ಸಾಕಷ್ಟು ರಂಗಭೂಮಿ ಕಲಾವಿದರು ‘ದಿಂಸೋಲ್’ ಸಿನೆಮಾದ ಇತರ ಪ್ತಾರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ‘ದಿಂಸೋಲ್’ ಸಿನೆಮಾದ ಟೈಟಲ್ ಮತ್ತು ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ನವೆಂಬರ್ ತಿಂಗಳ ಎರಡನೇ ವಾರ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಿದ್ದು, ಡಿಸೆಂಬರ್ ತಿಂಗಳಲ್ಲಿ ಇಡೀ ಕರಾವಳಿ ಭಾಗದಲ್ಲಿ ‘ದಿಂಸೋಲ್’ ಸಿನೆಮಾದ ಮೊದಲ ಹಂತದ ಶೂಟಿಂಗ್ ಆರಂಭವಾಗಲಿದೆ.
ಮುಂದಿನ ವರ್ಷ ‘ದಿಂಸೋಲ್’ ತೆರೆಗೆ
‘ದಿಂಸೋಲ್’ ಸಿನಿಮಾಗೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ನಾಗೇಂದ್ರ ಗಾಣಿಗ ಸಾಹಿತ್ಯ, ಸಂಭಾಷಣೆ ಬರೆಯುತ್ತಿದ್ದು, ‘ಕೆಜಿಎಫ್’ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ ನಿರ್ದೇಶನ ಚಿತ್ರಕ್ಕೆ ಇರಲಿದೆ. ‘ಸಂಹಿತಾ ಪ್ರೊಡಕ್ಷನ್’ ನಡಿ ‘ದಿಂಸೋಲ್’ ಚಿತ್ರ ಮೂಡಿಬರಲಿದೆ. ಚಿತ್ರತಂಡ ಯೋಜನೆಯಂತೆ ಎಲ್ಲವೂ ನಡೆದರೆ, ಮುಂದಿನ ವರ್ಷದ ಅಂತ್ಯಕ್ಕೆ ‘ದಿಂಸೋಲ್’ ಸಿನೆಮಾ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆಯಿದೆ.