Pop Corner

‘ಬಿಟಿಎಸ್’ ಟ್ರೇಲರ್ ರಿಲೀಸ್…

‘ಬಿಟಿಎಸ್’ ಎಂದರೆ ‘ಬಿಹೈಂಡ್ ದಿ ಸೀನ್ಸ್’ ಎಂದರ್ಥ..

ನ. 8ಕ್ಕೆ ಯುವ ಸಿನಿಮೋತ್ಸಾಹಿಗಳ ‘ಬಿಟಿಎಸ್’ ಸಿನಿಮಾ ತೆರೆಗೆ ಎಂಟ್ರಿ

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಮತ್ತೆ ಕೆಲವು ಬಿಗ್ ಬಜೆಟ್ ಸಿನೆಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನೆಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಸಿನೆಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ ಐವರು ಯುವ ಸಿನಿಮೋತ್ಸಾಹಿಗಳ ಹೊಸ ಪ್ರಯತ್ನ ‘ಬಿಟಿಎಸ್’ ಈಗ ಬಿಡುಗಡೆಗೆ ಸಜ್ಜಾಗಿದೆ.

ಏನಿದು ‘ಬಿಟಿಎಸ್’ ಅಂದ್ರೆ..?

ಅಂದಹಾಗೆ, ಚಿತ್ರತಂಡದ ಪ್ರಕಾರ ಈ ಸಿನೆಮಾದಲ್ಲಿ ‘ಬಿಟಿಎಸ್’ ಎಂದರೆ ‘ಬಿಹೈಂಡ್ ದಿ ಸೀನ್ಸ್’ ಎಂಬ ಅರ್ಥವಂತೆ. ಇಡೀ ಸಿನೆಮಾದ ಥೀಮ್ – ತೆರೆಯ ಹಿಂದಿನ ಕಥೆಗಳು, ಹೀಗಾಗಿ ಈ ಚಿತ್ರಕ್ಕೆ ‘ಬಿಟಿಎಸ್’ ಎಂದು ಈ ಟೈಟಲ್ ಇಡಲಾಗಿದೆಯಂತೆ. ಇತ್ತೀಚೆಗಷ್ಟೇ ‘ಬಿಟಿಎಸ್’ ಸಿನೆಮಾದ ಟ್ರೇಲರ್ ರಿಲೀಸ್ ಆಗಿದ್ದು, ಹೊಸಬರ ಪ್ರಯತ್ನ ಗಮನ ಸೆಳೆಯುತ್ತಿದೆ. ಈ ಕಾಲದ ನಿರ್ದೇಶಕರ ಐದು ಕಥೆಗಳು ಈ ಸಿನಿಮಾದಲ್ಲಿವೆ. ‘ಬಾನಿಗೊಂದು ಎಲ್ಲೆ ಎಲ್ಲಿದೆ’, ‘ಕಾಫಿ, ಸಿಗರೆಟ್ಸ್ ಅಂಡ್ ಲೈನ್ಸ್’, ‘ಹೀರೋ’, ‘ಬ್ಲ್ಯಾಕ್ ಬಸ್ಟರ್’ ಹಾಗೂ ‘ಸುಮೋಹ’ ಎಂಬ ಕಥೆಗಳು ‘ಬಿಟಿಎಸ್’ ಚಿತ್ರದ ಹೈಲೆಟ್ಸ್ ಎಂಬುದು ಚಿತ್ರತಂಡದ ಮಾತು.

‘ಬಿಟಿಎಸ್’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಬಹುದು…

 

ಭರದಿಂದ ಸಾಗಿದ ವಿಭಿನ್ನ ಪ್ರಚಾರ

ಕಳೆದ ಕೆಲ ತಿಂಗಳಿನಿಂದ ಭರದಿಂದ ಈ ಸಿನೆಮಾದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ‘ಬಿಟಿಎಸ್’ ಸಿನೆಮಾ ಈಗ ಬಿಡುಗಡೆ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಇದೇ ನ. 8ಕ್ಕೆ ‘ಬಿಟಿಎಸ್’ ಸಿನೆಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.  ಮತ್ತೊಂದೆಡೆ, ‘ಬಿಟಿಎಸ್’ ಸಿನೆಮಾದ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ವಿಭಿನ್ನ ಪ್ರಚಾರ ಕಾರ್ಯಗಳನ್ನು  ನಡೆಸುತ್ತಿದೆ. ಚಿತ್ರತಂಡ ಜನರ ಬಳಿಗೆ ಹೋಗಿ ಅವರು ಕಾಫಿ ಕುಡಿಯುವ, ಸಿಗರೆಟ್ ಸೇದುವ ಟೈಮಲ್ಲೇ ‘ಬಿಟಿಎಸ್’ ಸಿನೆಮಾ ಟೀಸರ್ ತೋರಿಸಿ, ಚಿತ್ರದತ್ತ ಸೆಳೆಯುವ ಪ್ರಯತ್ನದಲ್ಲಿದೆ. ಚಹಾ ಅಂಗಡಿ, ದರ್ಶಿನಿ ಹೊಟೇಲ್‌ ಮೊದಲಾದೆಡೆ ಬಿಳಿ ಹಾಳೆಯಲ್ಲಿ ಕ್ಯೂಆರ್ ಕೋಡ್ ಹಾಕಿ ಗಮನ ಸೆಳೆಯುವ ಟ್ಯಾಗ್‌ಲೈನ್‌ನೊಂದಿಗೆ ‘ಬಿಟಿಎಸ್’ ಸಿನೆಮಾ ಪ್ರಮೋಶನ್ ಮಾಡಲಾತ್ತಿದೆ. ಇಂಥದ್ದೊಂದು ಪ್ರಚಾರಕ್ಕೆ ಉತ್ತಮ ಸ್ಪಂದನೆ ಕೂಡ ಸಿಗುತ್ತಿರುವುದಕ್ಕೆ ಚಿತ್ರತಂಡ ಖುಷಿಯಲ್ಲಿದೆ.

ಐವರು ನಿರ್ದೇಶಕರ ಕೈಯಲ್ಲಿ ಅರಳಿದ ಚಿತ್ರ!

ಇನ್ನು ‘ಬಿಟಿಎಸ್’ – ‘ಬಿಹೈಂಡ್ ದಿ ಸ್ಕ್ರೀನ್’ ಚಿತ್ರವನ್ನು ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್. ಶಂಕದ್, ಅಪೂರ್ವ ಭಾರದ್ವಾಜ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇಷ್ಟು ಜನ ನಿರ್ದೇಶಕರೇ ಸಿನೆಮಾಗೆ ಬಂಡವಾಳ ಹಾಕಿಸಿನೆಮಾವನ್ನು ನಿರ್ಮಿಸಿರುವುದು ಈ ಸಿನೆಮಾದ ಮತ್ತೊಂದು ವಿಶೇಷ. ನಟರಾದ ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯಾ, ಕೌಶಿಕ್, ಚಂದನ, ಮೇದಿನಿ ಕೆಳಮನೆ, ಆಹನ್, ಜಹಾಂಗೀರ್ ನೀನಾಸಂ ಸೇರಿದಂತೆ ಅನೇಕ ಕಲಾವಿದರು ‘ಬಿಟಿಎಸ್’ ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ತನ್ನ ಟೈಟಲ್‌, ಟ್ರೇಲರ್‌ ಮೂಲಕ ಒಂದಷ್ಟು ಸಿನಿ ಪ್ರಿಯರ ಗಮನ ಸೆಳೆದಿರುವ ‘ಬಿಟಿಎಸ್’ ಸಿನೆಮಾ ಚಿತ್ರಮಂದಿರದಲ್ಲಿ ಎಷ್ಟರ ಮಟ್ಟಿಗೆ ನೋಡುಗರ ಮನ ಗೆಲ್ಲಲಿದೆ ಎಂಬುದು ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!