ಕೇವಲ 99 ರೂ. ಗೆ ‘ಆರಾಮ್’ ಆಗಿ ‘ಅರವಿಂದ್ ಸ್ವಾಮಿ’ ನೋಡಬಹುದು!

ಆಡಿಯನ್ಸ್‌ಗೆ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರತಂಡದ ಕಡೆಯಿಂದ ಬಂಪರ್ ಆಫರ್
ದುಬಾರಿ ಟಿಕೆಟ್ ದರಕ್ಕೆ ಬೇಸತ್ತ ಪ್ರೇಕ್ಷಕರಿಗೆ ಚಿತ್ರತಂಡದ ಕಡೆಯಿಂದ ಗುಡ್ ನ್ಯೂಸ್…
99 ರೂ. ಗೆ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾ ನೋಡಲು ಆಫರ್
ಒಂದೆಡೆ ಚಿತ್ರಮಂದಿರಗಳಲ್ಲಿ ಸಿನೆಮಾಗಳ ಟಿಕೆಟ್ ದರ ಗಗನಮುಖಿಯಾಗಿದೆ ಎಂದು ಪ್ರೇಕ್ಷಕರು ಗೊಣಗುತ್ತಿದ್ದರೆ, ಮತ್ತೊಂದೆಡೆ ಒಂದಷ್ಟು ಸಿನೆಮಾ ಮಂದಿ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಸಿನೆಮಾಗಳಿಗೆ ಏಕರೂಪ ಪ್ರವೇಶ ದರ ನಿಗದಿಪಡಿಸಲು ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ ಸದ್ಯ ಬಿಡುಗಡೆಗೆ ರೆಡಿಯಾಗಿರುವ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾ ಬಿಡುಗಡೆಗೂ ಮೊದಲೇ ಪ್ರೇಕ್ಷಕರಿಗೆ ಏಕರೂಪದ ಟಿಕೆಟ್ ದರ ನಿಗದಿಪಡಿಸಿ, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವ ಪ್ರಯತ್ನ ಮಾಡಿದೆ.
ಹೌದು, ಇದೇ ನವೆಂಬರ್ 22ಕ್ಕೆ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾ ತೆರೆಗೆ ಬರುತ್ತಿದೆ. ಈಗಾಗಲೇ ತನ್ನ ಟೈಟಲ್, ಟೀಸರ್, ಹಾಡುಗಳ ಮೂಲಕ ಸಿನೆಮಾ ಪ್ರಿಯರ ಗಮನ ಸೆಳೆದಿರುವ ‘ಆರಾಮ್ ಅರವಿಂದ್ ಸ್ವಾಮಿ’ ಈಗ ತನ್ನ ಟಿಕೆಟ್ ದರದ ವಿಷಯವಾಗಿ ಸಿನಿ ಮಂದಿಯನ್ನು ಸೆಳೆಯುತ್ತಿದೆ. ಬಿಡುಗಡೆಗೂ ಮೊದಲೇ ‘ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾ ಟಿಕೆಟ್ ಬೆಲೆಯನ್ನು ನಿಗದಿಪಡಿಸಿರುವ ಚಿತ್ರತಂಡ, ಕೇವಲ 99 ರೂ. ಗೆ ಸಿನೆಮಾವನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದೆ.
ಪ್ರೇಕ್ಷಕರನ್ನು ಸೆಳೆಯುವ ‘ಅರವಿಂದ್ ಸ್ವಾಮಿ’ ತಂತ್ರ!
ಕನ್ನಡ ಸಿನೆಮಾಗಳನ್ನು ನೋಡಲು ಥಿಯೇಟರಿನತ್ತ ಬರುವ ಪ್ರೇಕ್ಷಕರ ಸಂಖ್ಯೆ ಮೊದಲಿಗಿಂತ ಕಡಿಮೆಯಾಗುತ್ತಿದ್ದು, ಇಂಥ ಸಂದರ್ಭದಲ್ಲಿ ಹೇಗಾದರೂ ಮಾಡಿ, ಮತ್ತೆ ಪ್ರೇಕ್ಷಕರನ್ನು ಥಿಯೇಟರಿನತ್ತ ಬರುವಂತೆ ಮಾಡುವ ಸವಾಲು ಎಲ್ಲಾ ಚಿತ್ರತಂಡಗಳ ಮೇಲಿದೆ. ಇಂಥ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರತಂಡ, ಕೇವಲ 99 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ತಂತ್ರಕ್ಕೆ ಮುಂದಾಗಿದೆ. ಅಂದಹಾಗೆ, ಇದೇ ನವೆಂಬರ್ 22ಕ್ಕೆ ತೆರೆ ಬರುತ್ತಿರುವ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾಗೆ ನಿಗದಿಪಡಿಸಲಾಗಿರುವ 99 ರೂಪಾಯಿ ಟಿಕೆಟ್ ದರದ ಈ ಆಫರ್ ಮೊದಲ 3 ದಿನಗಳ ಕಾಲ ಮಾತ್ರ ಇರುತ್ತದೆ.
ಇನ್ನು ಚಿತ್ರತಂಡದ ಇಂಥದ್ದೊಂದು ವಿಭಿನ್ನ ಪ್ರಯತ್ನಕ್ಕೆ ಚಿತ್ರರಂಗದ ಅನೇಕರು ಸಾಥ್ ನೀಡಿದ್ದಾರೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ನಿರ್ಮಾಪಕ ಕಂ ವಿತರಕರಾದ ಜಯಣ್ಣ, ಕಾರ್ತಿಕ್ ಗೌಡ, ಯೋಗಿ ಜಿ. ರಾಜ್, ನಿರ್ದೇಶಕ ತರುಣ್ ಸುಧೀರ್, ನಟ ಯುವರಾಜ್ ಕುಮಾರ್ 99 ರೂಪಾಯಿ ಕೊಟ್ಟು ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರದ ಟಿಕೆಟ್ ಖರೀದಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾಗೆ ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್ ‘ ರೀತಿಯ ಇಂಟ್ರೆಸ್ಟಿಂಗ್ ಚಿತ್ರಗಳನ್ನು ಕಟ್ಟಿಕೊಟ್ಟಿದ್ದ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಮಾಸ್ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿರುವ ಅನೀಶ್ ತೇಜೇಶ್ವರ್ ಕಂಪ್ಲೀಟ್ ಲವರ್ ಬಾಯ್ ಆಗಿ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಮಿಲನ ನಾಗರಾಜ್ ಹಾಗೂ ಹೃತಿಕಾ ಶ್ರೀನಿವಾಸ್ ನಾಯಕಿಯರಾಗಿ ಮಿಂಚಿದ್ದಾರೆ. ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದು, ವೈವಿಬಿ ಶಿವಸಾಗರ್ ಛಾಯಾಗ್ರಹಣವಿದೆ. ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಚಿತ್ರ ನಿರ್ಮಾಣ ಮಾಡಿದ್ದಾರೆ.