ಟ್ರೇಲರ್ ನಲ್ಲಿ ಕಂಡಳು…, ಇವಳು ‘ಶಾನುಭೋಗರ ಮಗಳು’ !

ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಶಾನುಭೋಗರ ಮಗಳು’ ಟ್ರೇಲರ್ ಬಿಡುಗಡೆ
‘ಮತ್ತೆ ಉದ್ಭವ’ ನಂತರ ಕೋಡ್ಲು ರಾಮಕೃಷ್ಣ ನಿರ್ದೇಶನದ ಚಿತ್ರವೊಂದು ಬಿಡುಗಡೆ ಆಗಿರಲಿಲ್ಲ. ಇದೀಗ ಅವರು ‘ಶಾನುಭೋಗರ ಮಗಳು’ ಎಂಬ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಈಗಾಗಲೇ ಚಿತ್ರದ ಸೆನ್ಸಾರ್ ಆಗಿದ್ದು, ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ‘ಶಾನುಭೋಗರ ಮಗಳು’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದೆ.
ಭಾಗ್ಯ ಕೃಷ್ಣಮೂರ್ತಿ ಕಾದಂಬರಿಗೆ ಚಿತ್ರರೂಪ
‘ಶಾನುಭೋಗರ ಮಗಳು’ ಚಿತ್ರವು ಭಾಗ್ಯ ಕೃಷ್ಣಮೂರ್ತಿ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಚಿತ್ರ. ‘ಭುವನ್ ಫಿಲಂಸ್’ ಲಾಂಛನದಲ್ಲಿ ಸಿ. ಎಂ. ನಾರಾಯಣ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ, ನಿರಂಜನ್ ಶೆಟ್ಟಿ, ಕಿಶೋರ್, ರಮೇಶ್ ಭಟ್, ಸುಧಾ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ, ಚನ್ನಪಟ್ಟಣ, ಚಿಕ್ಕಬಳ್ಳಾಪುರದ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
‘ಶಾನುಭೋಗರ ಮಗಳು’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
18ನೇ ಶತಮಾನದ ಕಥೆಯನ್ನು ಹೊತ್ತ ಚಿತ್ರ
ಅಂದಹಾಗೆ ‘ಶಾನುಭೋಗರ ಮಗಳು’ 18ನೇ ಶತಮಾನದ ಕಥೆಯ ಸುತ್ತ ನಡೆಯುವ ಚಿತ್ರ. ಈ ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಪಾತ್ರ ಬರುತ್ತದೆ. ಈ ಪಾತ್ರವನ್ನು ನಟ ಕಿಶೋರ್ ನಿರ್ವಹಿಸಿದ್ದಾರೆ. ‘ಶಾನುಭೋಗರ ಮಗಳು’ ಸಿನೆಮಾದಲ್ಲಿ ನಾಯಕ ನಟಿ ರಾಗಿಣಿ ಪ್ರಜ್ವಲ್ ಶರಾವತಿ ಎಂಬ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ರಾಗಿಣಿ ಪ್ರಜ್ವಲ್, ‘ತುಂಬಾ ದಿನಗಳ ಗ್ಯಾಪ್ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಮೂಲತಃ ಕ್ಲಾಸಿಕಲ್ ಡ್ಯಾನ್ಸರ್. ಈ ಚಿತ್ರದಲ್ಲಿ ಡಬ್ಬಿಂಗ್ ಕೂಡ ಮಾಡಿದ್ದೇನೆ. ದುಃಖದ ಸನ್ನಿವೇಶಗಳಲ್ಲಿ ಗ್ಲಿಸರಿನ್ ಉಪಯೋಗಿಸದೆ ಅಭಿನಯಿಸಿದ್ದೇನೆ. ಇಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ’ ಎಂದು ಹೇಳಿದ್ದಾರೆ. ‘ಶಾನುಭೋಗರ ಮಗಳು’ ಚಿತ್ರಕ್ಕೆ ಜೈಆನಂದ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ, ರಮೇಶ್ ಕೃಷ್ಣನ್ ಅವರ ಸಂಗೀತವಿದೆ. ಬಿ.ಎ. ಮಧು ಸಂಭಾಷಣೆಗಳನ್ನು ರಚಿಸಿದ್ದಾರೆ. ಸದ್ಯ ಭರದಿಂದ ‘ಶಾನುಭೋಗರ ಮಗಳು’ ಸಿನೆಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಆದಷ್ಟು ಬೇಗ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.