‘ದಿಗಿಲ್’ ಹುಟ್ಟಿಸುವ ಸಿನೆಮಾಕ್ಕೆ ಕೈ ಹಾಕಿದ ಚೇತನ್ ಮುಂಡಾಡಿ!

ತೆರೆಗೆ ಬರುತ್ತಿದೆ ತುಳುನಾಡಿನ ಮತ್ತೊಂದು ಕಥೆ…
ಕನ್ನಡ-ತುಳು-ಮಲೆಯಾಳಂ ಭಾಷೆಗಳಲ್ಲಿ ‘ದಿಗಿಲ್’ ಚಿತ್ರ ನಿರ್ಮಾಣ
ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ‘ದಿಗಿಲ್’
ಕಳೆದ ಬಾರಿ ‘ಭಾವಪೂರ್ಣ’ ಎಂಬ ನವಿರಾದ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಚೇತನ್ ಮುಂಡಾಡಿ, ಈ ಬಾರಿ ಪ್ರೇಕ್ಷಕರನ್ನು ಕೂತಲ್ಲಿಯೇ ಬೆಚ್ಚಿ ಬೀಳಿಸುವ ಸಿನೆಮಾವೊಂದನ್ನು ತೆರೆಗೆ ತರುವ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹೌದು, ಸದ್ಯ ಚೇತನ್ ಮುಂಡಾಡಿ ‘ದಿಗಿಲ್’ ಎಂಬ ಸಿನೆಮಾವನ್ನು ನಿರ್ದೇಶಿಸುತ್ತಿದ್ದು, ಈಗಾಗಲೇ ಸದ್ದಿಲ್ಲದೆ ತಮ್ಮ ಚಿತ್ರದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ.

ಏನಿದು ‘ದಿಗಿಲ್’…?
ಈ ಬಾರಿ ಚೇತನ್ ಮುಂಡಾಡಿ ಅವರು ತುಳುನಾಡಿನಲ್ಲಿ ಆರಾಧಿಸುವ ಜುಮಾದಿ ಬಂಟ ದೈವದ ಕಥೆಯನ್ನು ‘ದಿಗಿಲ್’ ಸಿನೆಮಾದ ಮೂಲಕ ತೆರೆಯ ಮೇಲೆ ತರುತ್ತಿದ್ದಾರೆ. ಜುಮಾದಿ ಬಂಟ ದೈವ ಮತ್ತು ಮಂಗಳಮುಖಿಯ ನಡುವಿನ ಕಥಾನಕವನ್ನು ಚೇತನ್ ಮುಂಡಾಡಿ ‘ದಿಗಿಲ್’ ಸಿನೆಮಾದಲ್ಲಿ ಹೇಳಲು ಹೊರಟಿದ್ದಾರೆ. ಇನ್ನು ‘ದಿಗಿಲ್’ ಎಂಬ ಪದಕ್ಕೆ ಭಯ ಎಂಬ ಅರ್ಥವಿದೆ. ಸಿನೆಮಾದ ಕಥೆಗೆ ಸೂಕ್ತ ಎಂಬ ಕಾರಣಕ್ಕೆ ಚೇತನ್ ಮುಂಡಾಡಿ ತಮ್ಮ ಸಿನೆಮಾಕ್ಕೆ ‘ದಿಗಿಲ್’ ಎಂಬ ಟೈಟಲ್ ಇಟ್ಟಿದ್ದಾರಂತೆ.
ಇನ್ನು ‘ದಿಗಿಲ್’ ಸಿನೆಮಾದ ಕಥೆ ಮತ್ತು ಟೈಟಲ್ ಬಗ್ಗೆ ಮಾತನಾಡುವ ಚೇತನ್ ಮುಂಡಾಡಿ ಅವರು, ”ದಿಗಿಲ್’ ಹೊಸತನದ ಕಥೆ. ಸತ್ಯ ಘಟನೆಯೊಂದರ ಕಥೆಯನ್ನು ಇಲ್ಲಿ ಹೇಳಲು ಹೊರಟಿದ್ದೇವೆ. ಇದು ಈ ಮಣ್ಣಿನ ಕಥೆ. ಆದರೆ ಹಿಂದೆಂದೂ ಕೇಳಿರದ ಕಥೆ ಇಲ್ಲಿದೆ. ಹೊಸಥರದ ಕಥೆಯೊಂದನ್ನು, ಹೊಸಥರದಲ್ಲಿ ಪ್ರೇಕ್ಷಕರ ಮುಂದೆ ಈ ಸಿನೆಮಾದಲ್ಲಿ ತರಲು ಹೊರಟಿದ್ದೇವೆ. ಸಿನೆಮಾದ ಪ್ರತಿ ಪಾತ್ರ, ದೃಶ್ಯಗಳು ನೋಡುಗರನ್ನು ಕಾಡುವಂತಿದೆ. ಖಂಡಿತವಾಗಿಯೂ ಈ ಸಿನೆಮಾ ನೋಡುಗರಿಗೆ ಹೊಸ ಅನುಭವ ಕೊಡಲಿದೆ’ ಎಂದು ವಿವರಣೆ ಕೊಡುತ್ತಾರೆ.
ಮೂರು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ ‘ದಿಗಿಲ್’
ಇನ್ನು ‘ದಿಗಿಲ್’ ಚಿತ್ರವು ತುಳು, ಕನ್ನಡ ಮತ್ತು ಮಲಯಾಳಂ ಹೀಗೆ ಮೂರು ಭಾಷೆಯಲ್ಲಿ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಳಂಜ, ಪುಂಜಾಲಕಟ್ಟೆ, ಮಡಂತ್ಯಾರು ಮತ್ತು ಬೆಂಗಳೂರಿನಲ್ಲಿ ‘ದಿಗಿಲ್’ ಸಿನೆಮಾದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಸದ್ಯ ಶೂಟಿಂಗ್ ಮುಗಿಸಿರುವ ‘ದಿಗಿಲ್’ ಚಿತ್ರತಂಡ ಡಬ್ಬಿಂಗ್ ನಲ್ಲಿ ನಿರತವಾಗಿದೆ. ಜನವರಿ ವೇಳೆಗೆ ರಿಲೀಸ್ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.
‘ರಾಮ್ ಮೂವೀಸ್’ ಮತ್ತು ‘ಎಂ.ಆರ್.ಪಿ ಎಂಟರ್‌ಟೈನ್ಮೆಂಟ್’ ಬ್ಯಾನರ್ ನಲ್ಲಿ ಮೈಸೂರು ರಮೇಶ್ ಮತ್ತು ರವಿಶಂಕರ್ ಪೈ ಜಂಟಿಯಾಗಿ ‘ದಿಗಿಲ್’ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಚೇತನ್ ರೈ ಮಾಣಿ, ಶೋಭಾ ಶೆಟ್ಟಿ, ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ಅಮಿತ್ ರಾವ್, ರಮೇಶ್ ರೈ ಕುಕ್ಕುವಳ್ಳಿ ಮುಂತಾದವರು ‘ದಿಗಿಲ್’ ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ದಿಗಿಲ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಚೇತನ್ ಮುಂಡಾಡಿ ಅವರೊಂದಿಗೆ ಎಚ್. ಕೆ ನೈನಾಡ್ ಅವರು ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವಿದ್ದು, ಪದ್ಮನಾಭನ್ ಮಣಿ ಕ್ಯಾಮರಾ ಕೈಚಳಕವಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ‘ದಿಗಿಲ್’ ಸಿನೆಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ನಿಧಾನವಾಗಿ ‘ದಿಗಿಲ್’ ಸಿನೆಮಾದ ಟೈಟಲ್ ಮತ್ತು ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.