Pop Corner

ಸ್ವೀಟಿ ಅನುಷ್ಕಾ ಶೆಟ್ಟಿಯ ‘ಘಾಟಿ’ ಲುಕ್!

ಅಭಿಮಾನಿಗಳ ಗಮನ ಸೆಳೆದ ‘ಅರುಂಧತಿ’ಯ ಹೊಸ ಅವತಾರ

ಹಣೆಯ ಬೊಟ್ಟು ಇಟ್ಟು, ಭಂಗಿ ಸೇದುತ್ತಾ ಬಂದ ಅನುಷ್ಕಾ…

ಅನುಷ್ಕಾ ಶೆಟ್ಟಿಯ ಬರ್ತ್‌ ಡೇಗೆ ಹೊರಬಂತು ‘ಘಾಟಿ’ ಲುಕ್‌

ಸೌಥ್‌ ಸಿನಿ ದುನಿಯಾದ ಕ್ವೀನ್ ಅನುಷ್ಕಾ ಶೆಟ್ಟಿ ಅವರ ಮುಂದಿನ ಸಿನೆಮಾ ಯಾವುದು ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೌದು, ಅನುಷ್ಕಾ ಶೆಟ್ಟಿ ಅಭಿನಯದ ಹೊಸ ಸಿನೆಮಾಕ್ಕೆ ‘ಘಾಟಿ’ ಎಂದು ಟೈಟಲ್‌ ಇಡಲಾಗಿದ್ದು, ಇದೀಗ ಅನುಷ್ಕಾ ಜನ್ಮದಿನದ ಪ್ರಯುಕ್ತ ‘ಘಾಟಿ’ ಸಿನೆಮಾದ ಟೈಟಲ್‌ ಮತ್ತು ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಅಂದಹಾಗೆ, ‘ಘಾಟಿ’ ಸಿನೆಮಾ ಕ್ರಿಯೇಟಿವ್ ಡೈರೆಕ್ಟರ್ ಕ್ರಿಷ್ ಜಾಗರ್ಲಮುಡಿ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ‘ಯೂವಿ ಕ್ರಿಯೇಷನ್ಸ್’ ಪ್ರಸ್ತುತಪಡಿಸುತ್ತಿರುವ ‘ಘಾಟಿ’ ಸಿನೆಮಾ ‘ಫಸ್ಟ್ ಫ್ರೇಮ್ ಎಂಟರ್‌ಟೈನ್ಮೆಂಟ್‌ʼ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿದೆ.

ಬ್ಲಾಕ್ ಬಸ್ಟರ್ ಸಿನೆಮಾ ‘ವೇದಂ’ ಯಶಸ್ಸಿನ ನಂತರ ಇದು ಅನುಷ್ಕಾ ಮತ್ತು ಕ್ರಿಷ್ ಎರಡನೇ‌ ಬಾರಿಗೆ ಒಟ್ಟಾಗಿ ಮಾಡುತ್ತಿರುವ ಚಿತ್ರವಾಗಿದೆ. ಘಾಟಿ’ ಚಿತ್ರವನ್ನು ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಾಗರ್ಲಮುಡಿ ನಿರ್ಮಿಸಿದ್ದಾರೆ. ‘ಯೂವಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಇದು ಅನುಷ್ಕಾ ಅವರ ನಾಲ್ಕನೇ ಸಿನಿಮಾ ಎನ್ನುವುದು ವಿಶೇಷ.

ರಕ್ತದೋಕುಳಿಯಲ್ಲಿ ಮಿಂದಿರುವ ಅನುಷ್ಕಾ ಲುಕ್‌…

ಅನುಷ್ಕಾ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡವು ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಿದ್ದು ರಕ್ತದೋಕುಳಿಯಲ್ಲಿ ಮಿಂದಿರುವ ಅನುಷ್ಕಾ ಅವರು ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಪೋಸ್ಟರ್‌ನಲ್ಲಿ ಅವರ ಕಠೋರ ಮುಖಭಾವ, ಹಣೆಯ ಬೊಟ್ಟು ಮತ್ತು ಭಂಗಿ ಸೇದುತ್ತಿರುವ ದೃಶ್ಯ ಅನುಷ್ಕಾ ಅವರ ಪಾತ್ರದ ಗಾಢತೆಯನ್ನು ಬಿಂಬಿಸುತ್ತಿದೆ. ನೀರು ತುಂಬಿದ ಕಣ್ಣುಗಳು ಮತ್ತು ಮೂಗಿನ ಎರಡು ಬದಿಗೆ ಹಾಕಿರುವ ನತ್ತು ಅವರ ಪಾತ್ರದ ತೀವ್ರತೆಯನ್ನು ಮತ್ತಷ್ಟು ಗಾಢವಾಗಿಸಿದೆ, ಮತ್ತು ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.

ಫಸ್ಟ್ ಲುಕ್ ಪೋಸ್ಟರಿನಲ್ಲಿ ಕಾಣುವ ಪ್ರತಿ ಅಂಶವೂ ‘ಘಾಟಿ’ ಚಿತ್ರದ ಪ್ರಮುಖ ಪಾತ್ರದ ಕಠಿಣ ಜೀವನದ ವಾಸ್ತವತೆಯನ್ನು ತೋರಿಸುತ್ತದೆ ಹಾಗೂ ಕಥೆಯಲ್ಲಿ ಅನುಷ್ಕಾ ಅವರ ಪಾತ್ರದ ಉಳಿವಿಗೆ ನಿರ್ಧಯ ಕ್ರೂರತೆಯು ಅವಶ್ಯ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಸಸ್ಪೆನ್ಸ್ ಮತ್ತು ಆಕ್ಷನ್-ಥ್ರಿಲ್ಲರ್ ‘ಘಾಟಿ’

‘ವಿಕ್ಟಿಮ್, ಕ್ರಿಮಿನಲ್, ಲೆಜೆಂಡ್’ ಎಂಬ ಟ್ಯಾಗ್ಲೈನ್‍‍ ಹೊಂದಿರುವ ‘ಘಾಟಿ’ ಸಾಮಾನ್ಯ ಕಥೆಗಳಿಗಿಂತ ಹೆಚ್ಚಿನದ್ದನ್ನೇನನ್ನೋ ಹೇಳುವ ಭರವಸೆ ಮೂಡಿಸಿದೆ. ಮಾನವೀಯತೆ, ಜೀವನ ಹೋರಾಟ ಮತ್ತು ಮುಕ್ತಿಯ ಕುರಿತ ಕಥಾಹಂದರವ ಹೊಂದಿದೆ. ಕ್ರಿಷ್ ಅವರ ನಿರ್ದೇಶನದಲ್ಲಿ ಗಾಢವಾದ ದೃಶ್ಯಗಳ ಮೂಲಕ ಪ್ರೇಕ್ಷಕರಿಗೆ ಒಂದು ಸಸ್ಪೆನ್ಸ್‌ನಿಂದ ಕೂಡಿದ, ಮನಕಲಕುವ ಸಿನೆಮಾ ನೀಡುವ ನಿರೀಕ್ಷೆಯಿದೆ. ಇದು ಸರಿ ಮತ್ತು ತಪ್ಪಿನ ಬಗ್ಗೆ‌ ಇರುವ ಸಿನಿಮಾ ಅಲ್ಲ, ಆದರೆ ಸರಿ ತಪ್ಪುಗಳ ನಡುವಿನ ಹುಡುಕಾಟದ ಕಥೆಯಾಗಿದೆ ಎಂಬುದು ಚಿತ್ರತಂಡದ ವಿವರಣೆ. ‘ಘಾಟಿ’ಯನ್ನು ಸಸ್ಪೆನ್ಸ್ ಮತ್ತು ಆಕ್ಷನ್-ಥ್ರಿಲ್ಲರ್ ಸಿನೆಮಾವಾಗಿ ಪ್ರಸ್ತುತಪಡಿಸಲಾಗುತ್ತಿದ್ದು, ಚಿತ್ರವು ಈಗ ಚಿತ್ರೀಕರಣದ ಅಂತಿಮ ಹಂತದಲ್ಲಿದೆ.

‘ಘಾಟಿ’ ಚಿತ್ರವನ್ನು ರಾಜೀವ್ ರೆಡ್ಡಿ, ಸಾಯಿ ಬಾಬು ಜಾಗರ್ಲಮುಡಿ ನಿರ್ಮಾಣ ಮಾಡಿದ್ದು, ನುರಿತ ತಾಂತ್ರಿಕ ತಂಡವು ಸಿನಿಮಾ ಕಟ್ಟುತ್ತಿದೆ. ಮನೋಜ್ ರೆಡ್ಡಿ ಕಟ್ಟಾಸನಿ ಛಾಯಾಗ್ರಹಣ, ನಾಗವೆಳ್ಳಿ ವಿದ್ಯಾ ಸಾಗರ್ ಸಂಗೀತ, ತೋಟಾ ತಾರ್ರಣಿ ಕಲಾ ನಿರ್ದೇಶನ ಹಾಗೂ ಚಾಣಕ್ಯ ರೆಡ್ಡಿ ತೂರುಪು ಅವರ ಸಂಕಲನ ಚಿತ್ರಕ್ಕಿದೆ. ಚಿಂತಕಿಂಡಿ ಶ್ರೀನಿವಾಸ ರಾವ್ ಅವರ ಕಥೆಗೆ ಸಾಯಿ ಮಾಧವ್ ಬುರ್ರ ಡೈಲಾಗ್ ಬರೆದಿದ್ದಾರೆ.

2025ಕ್ಕೆ ‘ಘಾಟಿ’ ದರ್ಶನ..?

‘ಘಾಟಿ’ ಚಿತ್ರವನ್ನು ಪ್ರತಿ ಹಂತದಲ್ಲಿಯೂ ತಾಂತ್ರಿಕವಾಗಿ ಅತ್ಯುನ್ನತ ಮಟ್ಟದಲ್ಲಿ ದೊಡ್ಡ ಬಜೆಟ್‌ನೊಂದಿಗೆ ನಿರ್ಮಿಸಲಾಗುತ್ತಿದೆ. ಈ ಪ್ಯಾನ್ ಇಂಡಿಯಾ ಚಿತ್ರವು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡದ ಮೂಲಗಳ ಪ್ರಕಾರ 2025ಕ್ಕೆ ‘ಘಾಟಿ’ ಸಿನೆಮಾ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Related Posts

error: Content is protected !!