‘ಥಗ್ ಲೈಫ್’ ಬಿಡುಗಡೆಗೆ ಮುಹೂರ್ತ ಫಿಕ್ಸ್!

ಬಹುನಿರೀಕ್ಷಿತ ‘ಥಗ್ ಲೈಫ್’ 2025ರ ಜೂನ್. 5ಕ್ಕೆ ರಿಲೀಸ್
ಮೂರುವರೆ ದಶಕದ ಬಳಿಕ ಮತ್ತೆ ಕಮಲ್-ಮಣಿರತ್ನಂ ಕಮಾಲ್…
ಏಳು ತಿಂಗಳ ಮುಂಚೆಯೇ ‘ಥಗ್ ಲೈಫ್’ ರಿಲೀಸ್ ಡೇಟ್ ಅನೌನ್ಸ್
ಕಮಲ್ ಹಾಸನ್ ಮತ್ತು ಮಣಿರತ್ನಂ ಅವರು 37 ವರ್ಷಗಳ ನಂತರ ‘ಥಗ್ ಲೈಫ್’ ಚಿತ್ರದೊಂದಿಗೆ ಮತ್ತೆ ಒಂದಾಗಿದ್ದಾರೆ. ಈ ಬಹುನಿರೀಕ್ಷಿತ ‘ಥಗ್ ಲೈಫ್’ ಚಿತ್ರವು 2025ರ ಜೂನ್ 5ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ನವೆಂಬರ್ 8 ರಂದು ನಟ ಕಮಲ್ ಹಾಸನ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಥಗ್ ಲೈಫ್’ ಸಿನೆಮಾದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಅದ್ಧೂರಿ ನಿರ್ಮಾಣದ ‘ಥಗ್ ಲೈಫ್’
‘ರಾಜ್ ಕಮಲ್ ಫಿಲಂಸ್ ಇಂಟರ್‌ನ್ಯಾಷನಲ್’ ಮತ್ತು ‘ಮದ್ರಾಸ್ ಟಾಕೀಸ್’ ಸಹ-ನಿರ್ಮಾಣದಲ್ಲಿ ಬರುತ್ತಿರುವ ಈ ಚಿತ್ರವನ್ನು ‘ರೆಡ್ ಜೈಯಂಟ್ ಮೂವೀಸ್’ ವಿತರಿಸಲಿದೆ. ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ‘ಥಗ್ ಲೈಫ್’ ಸಿನೆಮಾ ನಿರ್ಮಾಣವಾಗಿದೆ. ಇನ್ನು ‘ಥಗ್ ಲೈಫ್’ ಚಿತ್ರದಲ್ಲಿ ಕಮಲ್ ಹಾಸನ್ ಅವರೊಂದಿಗೆ, ಸಿಲಂಬರಸನ್ ಟಿ. ಆರ್, ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ, ನಾಸರ್ ಮತ್ತಿತರ ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಹು ನಿರೀಕ್ಷಿತ ‘ಥಗ್ ಲೈಫ್’ ಚಿತ್ರಕ್ಕೆ ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ‘ಥಗ್ ಲೈಫ್’ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಮಣಿರತ್ನಂ ಹಾಗೂ ಕಮಲ್ ಹಾಸನ್ ಜಂಟಿಯಾಗಿ ಬರೆದಿದ್ದು, ಮಣಿರತ್ನಂ ಈ ಸಿನೆಮಾಕ್ಕೆ ನಿರ್ದೇಶನ ಮಾಡಿದ್ದಾರೆ. ರವಿ ಆರ್. ಚಂದ್ರನ್ ಅವರ ಸಿನಿಮಾಟೋಗ್ರಫಿ, ಅನ್ಬರಿವ್ ಅವರ ಆ್ಯಕ್ಷನ್ ಕೋರಿಯಾಗ್ರಫಿ ‘ಥಗ್ ಲೈಫ್’ ಚಿತ್ರಕ್ಕಿದೆ.