ಬಿಡುಗಡೆಯಾಯ್ತು ‘ಗುಂಮ್ಟಿ’ ಸಿನೆಮಾ ಟ್ರೇಲರ್

ಕುಡುಬಿ ಜನಜೀವನ ‘ಗುಂಮ್ಟಿ’ ಮೂಲಕ ಅನಾವರಣ
ತೆರೆಗೆ ಬರಲು ತಯಾರಾಗುತ್ತಿದೆ ಕಡಲತಡಿಯ ಕಥೆ
ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನೆಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನೆಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, ‘ಗುಂಮ್ಟಿ’ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದು, ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ‘ಗುಂಮ್ಟಿ’ ಸಿನೆಮಾದಲ್ಲಿ ವೈಷ್ಣವಿ ನಾಡಿಗ್ ನಾಯಕಿಯಾಗಿ ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ‘ಗುಂಮ್ಟಿ’ ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ. ‘ಗುಂಮ್ಟಿ’ ಸಿನೆಮಾದ ಹಾಡಿಗೆ ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.
‘ಗುಂಮ್ಟಿ’ ಸಿನೆಮಾದ ಟ್ರೇಲರ್ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು…
‘ಗುಂಮ್ಟಿ’ ಸಿನೆಮಾ ಟ್ರೇಲರ್‌ನಲ್ಲೇನಿದೆ…?
‘ಗುಂಮ್ಟಿ’ ಸಿನೆಮಾದ ಪ್ರಚಾರ ಕಾರ್ಯಕ್ಕೂ ಮೊದಲೇ ಚಿತ್ರತಂಡ ಹೇಳಿರುವಂತೆ, ಕರ್ನಾಟಕದ ಕರಾವಳಿ ಭಾಗದ ಕುಡುಬಿ ಸಮುದಾಯದ ಜಾನಪದ ಕಲೆ ‘ಗುಂಮ್ಟಿ’ ಕಲೆಯನ್ನು ಅದೇ ಹೆಸರಿನಲ್ಲಿ ಸಿನೆಮಾವಾಗಿ ತೆರೆಗೆ ತರಲಾಗುತ್ತಿದೆ. ‘ಗುಂಮ್ಟಿ’ ಕಲೆಯನ್ನು ಉಳಿಸಿಕೊಳ್ಳಲು ಹೋರಾಡುವ ಕುಡುಬಿ ಸಮುದಾಯದ ಹುಡುಗನೊಬ್ಬನ ಹೋರಾಟದ ಕಥೆಯನ್ನು ‘ಗುಂಮ್ಟಿ’ ಸಿನೆಮಾದ ಟ್ರೇಲರ್‌ನಲ್ಲಿ ತೆರೆದಿಡಲಾಗಿದೆ. ಕಲೆ, ಪ್ರೀತಿ, ಬದುಕು, ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ ಮತ್ತು ಆಧುನಿಕತೆಯ ನಡುವಿನ ಸಂಘರ್ಷ ಹೀಗೆ ಹಲವು ವಿಷಯಗಳನ್ನು ‘ಗುಂಮ್ಟಿ’ ಸಿನೆಮಾದ ಟ್ರೇಲರ್ ನಲ್ಲಿ ಹೇಳಲಾಗಿದೆ.