‘ಲವ್ ರೆಡ್ಡಿ’ಗೆ ‘ಸಲಗ’ನ ಬೆಂಬಲ…

ಹೊಸಬರ ಬೆನ್ನಿಗೆ ನಿಂತ ದುನಿಯಾ ವಿಜಯ್
‘ಲವ್ ರೆಡ್ಡಿ’ಗೆ ‘ಭೀಮ’ ಬಲ: ದುಬೈನಲ್ಲೂ ರಿಲೀಸ್
ಕನ್ನಡದಲ್ಲೂ ತೆರೆ ಕಾಣುತ್ತಿದೆ ‘ಲವ್ ರೆಡ್ಡಿ’
ಬಹುತೇಕ ಹೊಸಬರೇ ಸೇರಿ ಮಾಡಿರುವ ನೈಜ ಘಟನೆ ಆಧಾರಿತ ‘ಲವ್ ರೆಡ್ಡಿ’ ಸಿನೆಮಾ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುವುದರ ಮೂಲಕ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ. ಹೈದರಾಬಾದ್ ಮೂಲದ ಸ್ಮರಣ್ ರೆಡ್ಡಿ ‘ಲವ್ ರೆಡ್ಡಿ’ ಸಿನೆಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನೆಮಾದಲ್ಲಿ ಅಂಜನ್ ರಾಮಚಂದ್ರ ಗೆ ನಾಯಕ ನಟಿಯಾಗಿ ಶ್ರಾವಣಿ ಅಭಿನಯಿಸಿದ್ದಾರೆ. ವಿಶೇಷ ಅಂತಂದ್ರೆ ನಟ ಕಂ ನಿರ್ದೇಶಕ ವಿಜಯ್ ಕುಮಾರ್ ಸಿನೆಮಾವನ್ನು ನೋಡಿ, ಕಂಟೆಂಟ್ ಇಷ್ಟವಾಗಿ ‘ಲವ್ ರೆಡ್ಡಿ’ ಸಿನೆಮಾವನ್ನು ಕನ್ನಡದಲ್ಲಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಜೊತೆಗೆ ‘ಹೊಂಬಾಳೆ ಫಿಲಂಸ್’ ಸಂಸ್ಥೆ ಕನ್ನಡದಲ್ಲಿ ಈ ಸಿನೆಮಾದ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ‘ಲವ್ ರೆಡ್ಡಿ’ ತೆಲುಗು ಸಿನೆಮಾವಾಗಿದ್ದು, ಇದೀಗ ಕನ್ನಡದಲ್ಲಿ ಡಬ್ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದೆ. ‘ಲವ್ ರೆಡ್ಡಿ’ ಸಿನೆಮಾದ ಪ್ರತಿ ಹಾಡುಗಳು, ಡೈಲಾಗ್ಸ್ ಎಲ್ಲವೂ ಕನ್ನಡದಲ್ಲೆ ಮೂಡಿಬಂದಿದೆ. ‘ಲವ್ ರೆಡ್ಡಿ’ ಆಂಧ್ರ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನೆಮಾವಾಗಿದ್ದು, ಈ ಸಿನೆಮಾದ ಕನ್ನಡ ಆವೃತ್ತಿಯ ಟ್ರೇಲರ್ ಅನ್ನು ನಟ ದುನಿಯಾ ವಿಜಯ್ ರಿಲೀಸ್ ಮಾಡುವುದರ ಮೂಲಕ ಹೊಸಬರಿಗೆ, ಹೊಸತಂಡಕ್ಕೆ ಸಾಥ್ ನೀಡಿದ್ದಾರೆ.
ಕನ್ನಡಿಗರಿಗೂ ‘ಲವ್ ರೆಡ್ಡಿ’ ಇಷ್ಟವಾಗಲಿದೆಯಂತೆ!
ನಿರ್ದೇಶಕ ಸ್ಮರಣ್ ರೆಡ್ಡಿ ಮಾತನಾಡಿ, ‘ತೆಲುಗಿನಲ್ಲಿ ‘ಲವ್ ರೆಡ್ಡಿ’ ಸಿನೆಮಾ ಸೆನ್ಸೇಷನಲ್ ಹಿಟ್ ಆಗಿದೆ. ಈಗ ‘ಲವ್ ರೆಡ್ಡಿ’ ಸಿನೆಮಾ ಇದೇ ನವೆಂಬರ್ 22ಕ್ಕೆ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗ್ತಿದೆ. ಈಗಾಗಲೇ ತೆಲುಗಿನ ಸ್ಟಾರ್ ನಟ ಪ್ರಭಾಸ್, ಹಾಗೂ ಸ್ಟಾರ್ ನಿರ್ದೇಶಕರು ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕನ್ನಡದಲ್ಲಿಯೂ ಈ ಸಿನೆಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ಲವ್ ರೆಡ್ಡಿ’ ಸಿನೆಮಾದ ಕನ್ನಡ ಟ್ರೇಲರ್ ವೀಕ್ಷಿಸಲು ಈ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಬಹುದು…
ನೋಡುಗರನ್ನು ‘ಲವ್ ರೆಡ್ಡಿ’ ಕಾಡುವಂಥ ಸಿನೆಮಾ…
ನಟ ವಿಜಯ್ ಕುಮಾರ್ ಮಾತನಾಡಿ, ‘ಕೇವಲ ನಾಲ್ಕು ದಿನಗಳ ಹಿಂದಷ್ಟೇ ‘ಲವ್ ರೆಡ್ಡಿ’ ಸಿನೆಮಾ ನೋಡಿದೆ. ಪ್ರತೀ ಪಾತ್ರಗಳು ಈಗಲೂ ನನಗೆ ಕಾಡ್ತಿದೆ. ಅಷ್ಟರ ಮಟ್ಟಿಗೆ ‘ಲವ್ ರೆಡ್ಡಿ’ ಸಿನೆಮಾ ಮೂಡಿ ಬಂದಿದೆ. ಸ್ವಲ್ಪ ಕೆಲಸಗಳಿಗೆ ದುಬೈಗೆ ಹೋಗ್ತಾ ಇದ್ದೀನಿ, ಸಾಧ್ಯ ಆದಷ್ಟು ಅಲ್ಲಿನವರನ್ನು ಭೇಟಿಯಾಗಿ ದುಬೈನಲ್ಲಿ ‘ಲವ್ ರೆಡ್ಡಿ’ ರಿಲೀಸ್ ಮಾಡುವ ಯೋಚನೆ ಮಾಡ್ತೀನಿ’ ಎಂದು ಹೇಳುತ್ತಾ, ಪ್ರತಿ ಪಾತ್ರದಾರಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ‘ನೋಡ್ರಪ್ಪಾ ಸಿನಿಮಾ ಚೆನಾಗಿಲ್ಲ ಅಂದ್ರೆ ಹಠ ಮಾಡ್ಬೇಡಿ, ನಮ್ಮ ಸಿನೆಮಾ ಚೆನ್ನಾಗಿದೆ ಅಂತ, ಸಿನೆಮಾ ಚೆನ್ನಾಗಿದ್ದಾಗ ಹಿಗ್ಗೋದು ಬೇಡ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸೋಣ’ ಎಂದು ಕಿವಿ ಮಾತೇಳುತ್ತಾ. ‘ನಿಮ್ಮ ಜೊತೆ ನಾನು ಯಾವಾಗಲೂ ಇರ್ತೀನಿ’ ಎಂದು ಚಿತ್ರತಂಡಕ್ಕೆ ವಿಜಯ್ ಕುಮಾರ್ ಭರವಸೆ ನೀಡಿದರು.