ಸೆಟ್ಟೇರಿತು ನವಪ್ರತಿಭೆಗಳ ‘ದಿ ಟಾಸ್ಕ್’ ಚಿತ್ರ

ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ..
ನೈಜ ಘಟನೆಯ ಸ್ಫೂರ್ತಿ ಆಧಾರಿತ ‘ದಿ ಟಾಸ್ಕ್’ಗೆ ಮುಹೂರ್ತದ ಸಂಭ್ರಮ…
ರಾಘು ಶಿವಮೊಗ್ಗ ನಿರ್ದೇಶನದ ಮೂರನೇ ಚಿತ್ರ
ಕನ್ನಡದಲ್ಲಿ ಈಗಾಗಕಲೇ ‘ಚೂರಿಕಟ್ಟೆ’, ‘ಪೆಂಟಗನ್’ ಸಿನೆಮಾಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ನಿರ್ದೇಶಕ ರಾಘು ಶಿವಮೊಗ್ಗ ಈಗ ಸದ್ದಿಲ್ಲದೆ ಹೊಸ ಸಿನೆಮಾವನ್ನು ಕೈಗೆತ್ತಿಕೊಂಡಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶನದ ಈ ಹೊಸ ಸಿನೆಮಾಕ್ಕೆ ‘ದಿ ಟಾಸ್ಕ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಸಿನೆಮಾ ಸೆಟ್ಟೇರಿದೆ. ಬೆಂಗಳೂರಿನ ಶ್ರೀಧರ್ಮಗಿರಿ ಮಂಜುನಾಥ ಸ್ವಾಮಿ ದೇಗುಲದಲ್ಲಿ ನಡೆದ ‘ದಿ ಟಾಸ್ಕ್’ ಸಿನೆಮಾದ ಮುಹೂರ್ತ ಸಮಾರಂಭದಲ್ಲಿ ಡಿವೈಎಸ್ ಪಿ ರಾಜೇಶ್ ‘ದಿ ಟಾಸ್ಕ್’ ಸಿನೆಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ‘ಕೈವಾ’ ಸಿನೆಮಾದ ಛಾಯಾಗ್ರಾಹಕಿ ಶ್ವೇತ ಪ್ರಿಯಾ ಕ್ಯಾಮೆರಾಗೆ ಚಾಲನೆ ಮಾಡುವ ಮೂಲಕ ‘ದಿ ಟಾಸ್ಕ್’ ಸಿನೆಮಾದ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ವೇಳೆ ‘ದಿ ಟಾಸ್ಕ್’ ಸಿನೆಮಾದ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದರು.
ನೈಜ ಘಟನೆಯ ಸ್ಫೂರ್ತಿಯ ‘ದಿ ಟಾಸ್ಕ್’ನಲ್ಲಿ ನವಪ್ರತಿಭೆಗಳ ಸಂಗಮ
ಇನ್ನು ‘ದಿ ಟಾಸ್ಕ್’ ಸಿನೆಮಾ ನೈಜ ಘಟನೆಯ ಸ್ಫೂರ್ತಿ ಆಧಾರಿತ ಸಿನಿಮಾ ಎಂಬುದು ಚಿತ್ರತಂಡದ ಮಾತು. ಈ ಹಿಂದೆ ರಾಘು ಶಿವಮೊಗ್ಗ ನಿರ್ದೇಶನದ ‘ಪೆಂಟಗನ್’ ಸಿನೆಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದ ಸಾಗರ್ ಹಾಗೂ ‘ಭೀಮ’ ಚಿತ್ರದಲ್ಲಿ ಖಳನಾಯಕನಾಗಿ ಪರಿಚಯರಾಗಿದ್ದ ಜಯಸೂರ್ಯ ಇಬ್ಬರೂ ಈ ಸಿನೆಮಾದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ‘ದಿ ಟಾಸ್ಕ್’ ಸಿನೆಮಾ ಮೂಡಿಬರುತ್ತಿದೆ. ಇಬ್ಬರು ನವ ನಾಯಕ ನಟರನ್ನು ಹೊರತುಪಡಿಸಿ ಉಳಿದಂತೆ ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೇ, ಶ್ರೀ ಲಕ್ಷ್ಮೀ, ಅರವಿಂದ್ ಕುಪ್ಳಿಕರ್, ಬಿಂಬಶ್ರೀ ನೀನಾಸಂ, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್ ಸೇರಿದಂತೆ ನಿರ್ದೇಶಕ ರಾಘು ಶಿವಮೊಗ್ಗ ಕೂಡ ‘ದಿ ಟಾಸ್ಕ್’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಡಿಸೆಂಬರ್‌ನಿಂದ ‘ದಿ ಟಾಸ್ಕ್’ ಶೂಟಿಂಗ್ ಆರಂಭ
‘ದಿ ಟಾಸ್ಕ್’ ಸಿನೆಮಾವನ್ನು ‘ಲೋಕಪೂಜ್ಯ ಪಿಕ್ಚರ್ ಹೌಸ್’ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ. ಇ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ‘ದಿ ಟಾಸ್ಕ್’ ಸಿನೆಮಾದ ಟೈಟಲ್ ಅನ್ನು ಘೋಷಿಸಿ ಸಿನಿಮಾದ ಮುಹೂರ್ತವನ್ನು ನೆರವೇರಿಸಿರುವ ಚಿತ್ರತಂಡ, ಇದೇ ಡಿಸೆಂಬರ್ ತಿಂಗಳಲ್ಲಿ ‘ದಿ ಟಾಸ್ಕ್’ ಸಿನೆಮಾದ ಚಿತ್ರೀಕರಣದ ಅಖಾಡಕ್ಕೆ ಇಳಿಯಲಿದೆ. ಡಿಸೆಂಬರ್ ಮೊದಲ ವಾರದಿಂದ ಚಿತ್ರತಂಡ ‘ದಿ ಟಾಸ್ಕ್’ ಸಿನೆಮಾದ ಮೊದಲ ಹಂತದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದೆ. ಮಡಿಕೇರಿ, ಬೆಂಗಳೂರು ಸುತ್ತಮುತ್ತ ‘ದಿ ಟಾಸ್ಕ್’ ಸಿನೆಮಾದ ಬಹುತೇಕ ಚಿತ್ರೀಕರಣ ನಡೆಯಲಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಅಂತ್ಯಕ್ಕೆ ‘ದಿ ಟಾಸ್ಕ್’ ಸಿನೆಮಾ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆಯಿದೆ.